ಗಣೇಶ ಹಬ್ಬದ ಪೂರ್ವಭಾವಿ ಸಭೆ

ರಾಯಚೂರಿನ ಜಿಲ್ಲಾಧಿಕಾರಿಗಳ ಭವನದಲ್ಲಿ ಬುಧವಾರ ಸಂಜೆ ಜಿಲ್ಲಾಧಿಕಾರಿ ಪೂವಿತಾ ಎಸ್ ಅಧ್ಯಕ್ಷತೆ ಯಲ್ಲಿ  ಗಣೇಶ ಹಬ್ಬದ ಪೂರ್ವಭಾವಿ ಸಭೆ ನಡೆಯಿತು. ಪರಸರ ಮಾಲಿನ್ಯ ನಿಯಂತ್ರಣ ಅಧಿಕಾರಿ ಸಂತೋಷ, ಸಿಪಿಐ ಉಮೇಶ ಕಾಂಬಳೆ,  ಮಹಾನಗರ ಪಾಲಿಕೆಯ ಪರಿಸರ ಅಧಿಕಾರಿ ಜೈಪಾಲ್ ರೆಡ್ಡಿ ಇದ್ದರು.
ರಾಯಚೂರಿನ ಜಿಲ್ಲಾಧಿಕಾರಿಗಳ ಭವನದಲ್ಲಿ ಬುಧವಾರ ಸಂಜೆ ಜಿಲ್ಲಾಧಿಕಾರಿ ಪೂವಿತಾ ಎಸ್ ಅಧ್ಯಕ್ಷತೆ ಯಲ್ಲಿ ಗಣೇಶ ಹಬ್ಬದ ಪೂರ್ವಭಾವಿ ಸಭೆ ನಡೆಯಿತು. ಪರಸರ ಮಾಲಿನ್ಯ ನಿಯಂತ್ರಣ ಅಧಿಕಾರಿ ಸಂತೋಷ, ಸಿಪಿಐ ಉಮೇಶ ಕಾಂಬಳೆ, ಮಹಾನಗರ ಪಾಲಿಕೆಯ ಪರಿಸರ ಅಧಿಕಾರಿ ಜೈಪಾಲ್ ರೆಡ್ಡಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪರಿಸರ ಸ್ನೇಹಿ, ಸೌಹಾರ್ದಯುತ ಆಚರಣೆಗೆ ಡಿಸಿ ಮನವಿ

ರಾಯಚೂರು ಜಿಲ್ಲೆಯಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ, ಸೌಹಾರ್ದಯುತವಾಗಿ ಆಚರಿಸಬೇಕೆಂದು ಜಿಲ್ಲಾಧಿಕಾರಿ ಪೂವಿತಾ ಎಸ್. ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಭವನದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಗಣೇಶ ಹಬ್ಬದ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪರಿಸರ ಸ್ನೇಹಿ ಮಣ್ಣಿನ ಗಣಪತಿಗಳನ್ನು ಪ್ರತಿಷ್ಠಾಪನೆ ಮಾಡುವುದರಿಂದ ಪರಿಸರಕ್ಕೆ ಮಾರಕವಾಗುವುದನ್ನು ತಪ್ಪಿಸಬಹುದು. ಪಿಒಪಿ ಯಿಂದ ನಿರ್ಮಿಸಿರುವ ಹಾಗೂ ಬಣ್ಣಲೇಪಿತ ಗಣೇಶ ಮೂರ್ತಿಗಳನ್ನು ನೀರಿನಲ್ಲಿ ವಿಸರ್ಜಿಸಿದಾಗ ವಿಷಕಾರಿ ರಾಸಾಯನಿಕಗಳು ಜಲಮೂಲಗಳಾದ ಕೆರೆ, ಬಾವಿ, ಹಳ್ಳ ಸೇರಿ ನೀರು ಕಲುಷಿತಗೊಳ್ಳುತ್ತದೆ. ಇದು ಜಲಚರಗಳಿಗೆ ಹಾಗೂ ಮಾನವನಿಗೆ ಅತ್ಯಂತ ಹಾನಿಕರ ಎಂದರು.

ಪಿ.ಒ.ಪಿ ಗಣಪತಿ ವಿಗ್ರಹಗಳ ಸಾಗಣೆ, ದಾಸ್ತಾನು ಹಾಗೂ ಮಾರಾಟವನ್ನು ತಡೆಗಟ್ಟಬೇಕು. ವಿಗ್ರಹಗಳ ತಯಾರಿಕಾ ಘಟಕ, ಮಾರಾಟ ಸ್ಥಳಗಳಿಗೆ ಅನಿರೀಕ್ಷಿತ ಭೇಟಿಗಳನ್ನು ನೀಡಿ, ತಪಾಸಣೆ ಮಾಡಬೇಕು ಎಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ ಆದೇಶದ ಪ್ರಕಾರ ನಮ್ಮ ನೀರಿನ ಮೂಲಗಳನ್ನು ನಾವು ರಕ್ಷಿಸಿಕೊಳ್ಳಬೇಕು. ಯಾವುದೇ ರಾಸಾಯನಿಕ ಬಣ್ಣ ಸಹಿತ ಪಿಒಪಿ ವಿಗ್ರಹಗಳನ್ನು ಯಾವುದೇ ನೀರಿನ ಮೂಲಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ. ಹಾಗೂ ಅವುಗಳನ್ನು ಉತ್ಪಾದನೆ ಸಹ ಮಾಡದಂತೆ ಹಸಿರು ನ್ಯಾಯ ಮಂಡಳಿಯು ಸೂಚಿಸಿದೆ. ಪಿಓಪಿ ಗಣೇಶ ಉತ್ಪಾದನೆ, ಮಾರಾಟ ಹಾಗೂ ವಿಸರ್ಜನೆಗೆ ಸಂಬಂಧಿಸಿದಂತೆ ಪಿಒಪಿ ಮೂರ್ತಿಗಳ ಉತ್ಪಾದನೆ, ಮಾರಾಟ ಹಾಗೂ ವಿಸರ್ಜನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಅನುಕೂಲವಾಗುವಂತೆ ಸ್ಥಳೀಯ ಸಂಸ್ಥೆಗಳು ಕೆರೆ, ನದಿಪಾತ್ರಗಳಲ್ಲಿ ಸ್ಥಳಗಳನ್ನು ನಿಗದಿಪಡಿಸಬೇಕು. ಸಾರ್ವಜನಿಕವಾಗಿ ಇಡಲಾಗುವ ಗಣೇಶ ವಿಗ್ರಹಗಳಿಗೆ ಪ್ರತಿ ಸಮಿತಿಯವರು ಕಡ್ಡಾಯವಾಗಿ ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ನಿಬಂಧನೆಗೊಳಪಟ್ಟ ಅನುಮತಿಗಳನ್ನು ಪಡೆದು ಬಳಿಕ ಪ್ರತಿಷ್ಠಾಪಿಸಬೇಕು ಎಂದು ಹೇಳಿದರು.

ಜಿಲ್ಲೆಗೆ ಹೊರ ರಾಜ್ಯದಿಂದ ಬರುವ ಪಿಒಪಿ ಗಣೇಶ ಮೂರ್ತಿಗಳ ಮೇಲೆ ಸೂಕ್ತ ನಿಗ ವಹಿಸಬೇಕು. ಅದಕ್ಕಾಗಿ ಜಿಲ್ಲೆಯ ಎಲ್ಲಾ ಚೆಕ್‌ಪೋಸ್ಟ್ ಗಳಲ್ಲಿ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಿ, ಪಿಒಪಿ ಗಣೇಶ ಮೂರ್ತಿಗಳು ಜಿಲ್ಲೆಗೆ ಬರದಂತೆ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಈ ಬಾರಿ ಪಿಒಪಿ ಗಣೇಶ ಮೂರ್ತಿಗಳು ಜಿಲ್ಲೆಯಲ್ಲಿ ಕಂಡುಬಂದಂತೆ ನೋಡಿಕೊಳ್ಳಬೇಕೆಂದು ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಪರಸರ ಮಾಲಿನ್ಯ ನಿಯಂತ್ರಣ ಅಧಿಕಾರಿ ಸಂತೋಷ, ಸಿಪಿಐ ಉಮೇಶ ಕಾಂಬಳೆ, ಮಹಾನಗರ ಪಾಲಿಕೆಯ ಪರಿಸರ ಅಧಿಕಾರಿ ಜೈಪಾಲ್ ರೆಡ್ಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net