ರಾಯಚೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಸಂಜೆ ಜಿಲ್ಲಾಧಿಕಾರಿ ಪೂವಿತಾ ಎಸ್., ಅಧ್ಯಕ್ಷತೆಯಲ್ಲಿ ಗಣೇಶ ಹಬ್ಬದ ಪ್ರಯುಕ್ತ ನಡೆದ ಶಾಂತಿ ಪಾಲನಾ ಸಮಿತಿ ಸಭೆ ನಡೆಯಿತು. ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ, ಎಸ್ಪಿ ಅರುಣಾಂಗ್ಷು ಗಿರಿ, ಎಎಸ್ಪಿ ಜಿ.ಹರೀಶ್, ಪ್ರಭಾರಿ ಪರಿಸರ ಸಂರಕ್ಷಣಾಧಿಕಾರಿ ಗಿರೀಶ್ ಇದ್ದರು.
ರಾಜ್ಯಕ್ಕೆ ಮಾದರಿಯಾಗುವಂತೆ ಗೌರಿಗಣೇಶ ಹಬ್ಬ ಆಚರಿಸಿ: ಡಿಸಿ ಪೂವಿತಾ
ರಾಯಚೂರು
ಜಿಲ್ಲೆಯಲ್ಲಿ ಗೌರಿಗಣೇಶ ಹಬ್ಬವನ್ನು ಶಾಂತಿ, ಸೌಹಾರ್ದಯುತವಾಗಿ ರಾಜ್ಯಕ್ಕೆ ಮಾದರಿಯಾಗುವಂತೆ ಆಚರಿಸುವದರ ಜೊತೆಗೆ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಸಹಕಾರ ನೀಡುವ ಮೂಲಕ ಪ್ರತಿಯೊಬ್ಬರೂ ಈ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕೆಂದು ಜಿಲ್ಲಾಧಿಕಾರಿ ಪೂವಿತಾ ಎಸ್. ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಗಣೇಶ ಹಬ್ಬದ ಪ್ರಯುಕ್ತ ನಡೆದ ಶಾಂತಿ ಪಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಿಒಪಿ ಹಾಗೂ ರಾಸಾಯನಿಕ ಮಿಶ್ರೀತ ಬಣ್ಣಗಳ ಮೂರ್ತಿಗಳನ್ನು ಪ್ರತಿಷ್ಠಾಪಿಸಬಾರದು. ಪರಿಸರ ಸ್ನೇಹಿ ಗಣೇಶ ವಿಗ್ರಹಗಳ ಪ್ರತಿಷ್ಠಾಪನೆ ಮಾಡಬೇಕು. ಸರ್ಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಗಳನ್ನು ತಾವೇಲ್ಲರು ಪಾಲಿಸಬೇಕು ಎಂದರು.
ಜಿಲ್ಲೆಯು ಭಾವೈಕ್ಯತೆಗೆ ಹೆಸರು ಪಡೆದಿದೆ. ಎಲ್ಲ ಸಮಾಜದವರು ಭಾವೈಕ್ಯದಿಂದ ಈ ಹಬ್ಬ ಆಚರಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಧ್ವನಿವರ್ಧಕಗಳನ್ನು ಬಳಸಬೇಕು. ಹಿರಿಯ ನಾಗರಿಕರು, ಮಕ್ಕಳು ಹಾಗೂ ಸಾರ್ವಜನಿಕರಿಗೆ ಗಣೇಶ ಮಂಡಳಿಗಳು ನಿಗಾವಹಿಸಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ರಸ್ತೆ ಮಧ್ಯೆ ಗಣೇಶನ ಪ್ರತಿಷ್ಠಾಪನೆ ಮಾಡಿದರೆ ರಸ್ತೆ ಸುಗಮ ಸಂಚಾರಕ್ಕೆ ತೊಂದರೆಯಾಗಲಿದೆ. ಹೀಗಾಗಿ ರಸ್ತೆ ನಡುವೆ ಗಣೇಶನನ್ನು ಕೂಡಿಸುವುದು ಬೇಡ. ಗಣೇಶನ ಪ್ರತಿಷ್ಠಾಪನೆಗೆ ಪೂರ್ವ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಮಾತನಾಡಿ, ಜಿಲ್ಲೆಯಲ್ಲಿ ನಿಗದಿತ ಎತ್ತರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು. ಗಣೇಶ ಮಂಡಳಿಯಿಅದ ಸ್ವಯಂ ಸೇವಕ ಇರಬೇಕು. ಹಿಂದೂ ಮುಸ್ಲಿಂ ಮಧ್ಯ ಯಾವುದೇ ರೀತಿಯಲ್ಲಿ ಗಲಾಟೆಯಾಗದಂತೆ ಪರಸ್ಪರ ಸಹೋದರತ್ವದಿಂದ ಈ ಹಬ್ಬ ಆಚರಿಸಬೇಕು. ಪರವಾನಿಗೆ ಇಲ್ಲದೇ ಪೋಸ್ಟರ್, ಬ್ಯಾನರ್ ಅವಳಡಿಸಬಾರದು. ಆಗ್ನಿ ಅವಘಡದ ಕುರಿತು ಎಚ್ಚರಿಕೆ ವಹಿಸಬೇಕು. ಜಿಲ್ಲೆಯಲ್ಲಿ ಡಿಜೆ ಸೌಂಡ್‌ನ್ನು ಕಡಿಮೆ ಪ್ರಮಾಣದಲ್ಲಿ ಇಡಬೇಕು. ರಾತ್ರಿ 10 ಗಂಟೆಯೊಳಗಾಗಿ ಗಣೇಶ ವಿಸರ್ಜನೆ ಮಾಡಬೇಕು. ಪತ್ರಿ ಗಣೇಶ ಮಂಡಳಿಯಲ್ಲಿ ಪ್ರಾಥಮಿಕ ಆರೋಗ್ಯ ರಕ್ಷಣೆ ಸಾಮಾಗ್ರಿಗಳನ್ನು ಕಡ್ಡಾಯವಾಗಿ ಇಡಬೇಕು ಎಂದರು.
ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ ಮಾತನಾಡಿ, ಪರಿಸರಕ್ಕೆ ಹಾನಿಯಾಗದಂತೆ ಗಣೇಶೋತ್ಸವ ಆಚರಣೆ ಮಾಡಬೇಕು. ಎಲ್ಲ ಜಿಲ್ಲೆಗಳಲ್ಲೂ ಪಿಒಪಿ ಗಣೇಶ ಮೂರ್ತಿ ಹಾಗೂ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಭಾರಿ ಪರಿಸರ ಸಂರಕ್ಷಣಾಧಿಕಾರಿ ಗಿರೀಶ್,ಪಾಲಿಕೆಯ ಜೋನಲ್ -01ರ ಆಯುಕ್ತ ಮಲ್ಲಿಕಾರ್ಜುನ, ಡಿಎಚ್‌ಓ ಡಾ.ನಂದಿತಾ ಎಂ.ಎನ್, ಎಎಸ್ಪಿ ಜಿ.ಹರೀಶ್, ತಹಶಿಲ್ದಾರ್ ಸುರೇಶ ವರ್ಮಾ, ಡಿವೈಎಸ್ಪಿ ಶಾಂತಮೂರ್ತಿ, ಸಿಪಿಐ ಉಮೇಶ್ ಕಾಂಬಳೆ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಪುಷ್ಪಲತಾ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜಿ.ಸುರೇಶ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.