ಭೂಮಿ ಫಲವತ್ತತೆ ಕುಂದಿಸುವ ಬೆಂಕಿ

ತೊಪ್ಪಲದೊಡ್ಡಿಯಲ್ಲಿ ರೈತರು ಕೋಲಿ, ಕಸ ಸುಡುತ್ತಿರುವುದು.
ತೊಪ್ಪಲದೊಡ್ಡಿಯಲ್ಲಿ ರೈತರು ಕೋಲಿ, ಕಸ ಸುಡುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕೋಲಿ-ಕಸ ಸುಡುವ ರೈತರು
  • ಕವಿತಾಳ ಕೃಷಿಕರಿಗೆ ಬೇಕಿದೆ ಸಮರ್ಪಕ ಮಾಹಿತಿ
ಕವಿತಾಳ: ಪಟ್ಟಣ ಮತ್ತು ಸುತ್ತ್ತಲಿನ ಗ್ರಾಮದ ರೈತರು ಮುಂಗಾರು ಹಂಗಾಮಿನಲ್ಲಿ ಬಿತ್ತನೆಗಾಗಿ ಭೂಮಿಯನ್ನು ಹಸನು ಮಾಡುತ್ತಿದ್ದು, ಇದಕ್ಕೂ ಪೂರ್ವದಲ್ಲಿ ಫಸಲು ಪಡೆದ ತೊಗರಿ, ಹತ್ತಿ, ಜೋಳದ ಬೆಳೆಗಳ ಕೋಲಿಗಳನ್ನು ಸುಡುತ್ತಿರುವುದರಿಂದ ಪರಿಸರ ಹಾಳಾಗುವುದರ ಜತೆಗೆ ಕೃಷಿ ಜಮೀನಿನ ಫಲವತ್ತತೆಗೆ ಹಾನಿಯಾಗುತ್ತಿದೆ.
ಹೀರಾ, ಚಿಂಚರಕಿ, ಹಣಗಿ, ಕವಿತಾಳ, ಅಮೀನಗಡ, ಪಾಮನಕಲ್ಲೂರು ಗ್ರಾಪಂ ವ್ಯಾಪ್ತಿಯಲ್ಲಿ ತೊಗರಿ ಬಿತ್ತನೆ ಮಾಡಲಾಗಿತ್ತು. ಈಗ ರಂಟೆ ಹೊಡೆದು ತೊಗರಿ ಕಟ್ಟಿಗೆಯನ್ನು ಸುಡುವ ಕೆಲಸಕ್ಕೆ ರೈತರು ಮುಂದಾಗಿದ್ದಾರೆ. ಕೆಲವೆಡೆ ಹತ್ತಿ ಬಿತ್ತನೆ ಮಾಡಿ ಉಳಿದ ಕಟ್ಟಿಗೆಯನ್ನು ಆಯ್ದು ಸುಡುತ್ತಿದ್ದಾರೆ. ಈ ಬಗ್ಗೆ ರೈತರನ್ನು ಕೇಳಿದರೆ ಇನ್ನು ವಾರದ ನಂತರ ಮಳೆ ಬಂದರೆ ಹತ್ತಿ ಮತ್ತು ತೊಗರಿ ಬಿತ್ತನೆ ಮಾಡಲಾಗುವುದು. ಅದಕ್ಕಾಗಿ ಹೊಲದಲ್ಲಿರುವ ಕಸವನ್ನು ತೆಗೆದು, ಸುಟ್ಟು ಹಸನು ಮಾಡಲಾಗುತ್ತಿದೆ ಎನ್ನುತ್ತಾರೆ.
ರೈತರಿಗೆ ಬೇಕಿದೆ ಮಾಹಿತಿ: ರೈತರು ಬೆಳೆಯನ್ನು ಕೊಯ್ಲು ಮಾಡಿದ ನಂತರ ಕೋಲಿ, ಕಸ ಸಂಗ್ರಹಿಸಿ ಹೊಲದಲ್ಲಿ ತಗ್ಗು ತೋಡಿ ಹಾಕಿ ಅದರ ಮೇಲೆ ಮಣ್ಣು ಹಾಕಿದರೆ ಸಾವಯುವ ಗೊಬ್ಬರವಾಗುತ್ತದೆ. ಎರೆಹುಳುಗಳು ಜನ್ಮ ತಾಳುತ್ತವೆ. ಇದನ್ನು ರೈತರು ಹೊಲಗಳಿಗೆ ಹಾಕಿದರೆ ಫಲವತ್ತತೆ ಹೆಚ್ಚಿ ಬೆಳೆಗಳು ಹುಲುಸಾಗಿ ಬರುತ್ತವೆ. ಇದರ ಬಗ್ಗೆ ಕೃಷಿ ಇಲಾಖೆ ರೈತರಿಗೆ ತಿಳಿಸುವ ಕೆಲಸ ಮಾಡಬೇಕಿದೆ.

ನಮ್ಮಲ್ಲಿ ಹೆಚ್ಚಾಗಿ ತೊಗರಿ ಬೆಳೆಯುತ್ತೇವೆ. ಕೊಯ್ಲೋತ್ತರ ಕೆಲಸಗಳು ಮುಗಿದ ಬಳಿಕ ಕಸ, ಕೋಲಿ ಸುಡಬೇಕು. ಇಲ್ಲದಿದ್ದರೆ ಬೆಳೆಗೆ ಕ್ರಿಮಿನಾಶಕ ಸಿಂಪಡಿಸಿದಾಗ ಹೊಲಕ್ಕೆ ಕೀಟಗಳ ಕಾಟ ಶುರುವಾಗುತ್ತದೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಬೆಳೆದ ಬೆಳೆಯ ಕಟ್ಟಿಗೆಯಿಂದ ಗೊಬ್ಬರ ಮಾಡಿಕೊಳ್ಳಬಹುದು ಎನ್ನುತ್ತಾರೆ. ಈ ಬಗ್ಗೆ ಗೊಂದಲವಿದ್ದು, ಕೃಷಿ ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡಬೇಕು. — ರಾಜಶೇಖರ ರೈತ, ತೊಪ್ಪಲದೊಡ್ಡಿ

"

ಬಹುತೇಕ ರೈತರು ಬೆಳೆದ ಬೆಳೆಗೆ ಕ್ರಿಮಿನಾಶಕ ಸಿಂಪರಣೆ ಮಾಡುತ್ತಾರೆ. ಹಾಗೆಂದು ಕೋಲಿ, ಕಸ ಸುಡುವುದು ತಪ್ಪು. ಕಟ್ಟಿಗೆಗಳಿಂದ ಗೊಬ್ಬರ ಮಾಡಿಕೊಳ್ಳಲು ಸರ್ಕಾರದ ವತಿಯಿಂದ ಸಹಾಯಧನ ನೀಡಲಾಗುತ್ತದೆ. ಕಟ್ಟಿಗೆಯನ್ನು ಸುಡಬಾರದು, ಸುಟ್ಟರೆ ಪರಿಸರ ಮತ್ತು ಬೆಳೆಯುವ ಬೆಳೆಗಳಿಗೂ ಮಾರಕ. — ಗುರುನಾಥ ಎಡಿ, ಕೃಷಿ ಇಲಾಖೆ, ಮಾನ್ವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net