ಲಿಂಗಸುಗೂರು: ನಾವು ಡೇಂಜರ್ ಜೋನ್‌ನಲ್ಲಿದ್ದೇವೆ. ಬೂತ್ ಮಟ್ಟದಲ್ಲಿ ಮನೆಮನೆಗೆ ಹೋಗಿ ಮತದಾರರ ಎನ್ಯುಮರೇಷನ್ ಫಾರ್ಮ್ ತುಂಬಿಕೊಡುವ ಕೆಲಸ ಆಗಿಲ್ಲ. ಪ್ರಜಾಪ್ರಭುತ್ವ ಗಟ್ಟಿ ಇರಬೇಕಾದರೆ ಮತದಾರರ ಪಟ್ಟಿ ಗಟ್ಟಿ ಇರಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಹೇಳಿದರು.
ಕಲಾಪ್ರಭು ಕಲ್ಯಾಣ ಮಂಟಪದಲ್ಲಿ ಮಂಗಳವಾರ ಎಸ್‌ಐಆರ್ ಕುರಿತು ಜಿಲ್ಲಾ ಮಟ್ಟದ ಬಿಜೆಪಿ ಮುಖಂಡರ ವಿಶೇಷ ಸಭೆ ಉದ್ಘಾಟಿಸಿ ಮಾತನಾಡಿದರು.
ಎಸ್‌ಐಆರ್ ಫಾರ್ಮ್ ತುಂಬಿ ವಾಪಸ್ ಕೊಡದಿದ್ದರೆ ಮತದಾರರ ಪಟ್ಟಿಯಲ್ಲಿ ಹೆಸರು ಬರುವುದಿಲ್ಲ. ಇದನ್ನು ಎಲ್ಲರೂ ಅರ್ಥ ಮಾಡಿಕೊಂಡು ಎಲ್ಲರೂ ಮತದಾರರ ನೋಂದಣಿ ನಮೂನೆ ತುಂಬಿ ಕೊಡುವುದನ್ನು ಮರೆಯಬಾರದು. ಮತದಾರರ ನೋಂದಣಿ ಕಾರ್ಯವನ್ನು ಮಸೀದಿ, ದರ್ಗಾಗಳಲ್ಲಿ ಮಾಡುತ್ತಿದ್ದಾರೆ.
ಒಂದು ಬೂತ್‌ನ ಮತದಾರರ ಪಟ್ಟಿಯಲ್ಲಿ ಬೇರೆ ಊರಿನವರು ಯಾರಿದ್ದಾರೆ, ಮೃತಪಟ್ಟವರು ಯಾರಿದ್ದಾರೆ, ಅಕ್ರಮ ಮತದಾರರು ಯಾರಿದ್ದಾರೆ, ಇದು ನಮಗೆ ಗೊತ್ತಿರಬೇಕು. ನಾವು ತಳಮಟ್ಟಕ್ಕೆ ಇಳಿದು ಕೆಲಸ ಮಾಡಿಲ್ಲ. ಈವರೆಗೆ ಕಾರ್ಯಕರ್ತರು ಮತದಾರರ ಪಟ್ಟಿ ಪರಿಷ್ಕರಣೆ ಗಂಭೀರವಾಗಿ ತೆಗೆದುಕೊಂಡಿಲ್ಲ.
ಪ್ರಧಾನ ಕಾರ್ಯದರ್ಶಿಗಳು, ಮಂಡಲ ಅಧ್ಯಕ್ಷರು, ಬಿಎಲ್‌ಎಗಳು ಮಹಾಶಕ್ತಿ ಕೇಂದ್ರಗಳನ್ನು ವಿಭಾಗ ಮಾಡಿಕೊಂಡು ಇನ್ಮುಂದೆ ಕ್ರಿಯಾಶೀಲರಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.