ಸಿಂಧನೂರು ತಾಲೂಕು ಹಂಚಿನಾಳಕ್ಯಾಂಪಿನ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮಿನಲ್ಲಿ ಗುರುವಾರ ಜೋಳ ಖರೀದಿ ಕೇಂದ್ರಕ್ಕೆ ಸಹಾಯಕ ಕೃಷಿ ಅಧಿಕಾರಿ ರುದ್ರಗೌಡ ಪಾಟೀಲ್, ಉಪತಹಸೀಲ್ದಾರ್ ಮಿಶ್ರಕೋಟೆ ಚಾಲನೆ ನೀಡಿದರು. ಸಂಘದ ಅಧ್ಯಕ್ಷ ಶೇಖರಗೌಡ ತುರಡಗಿ, ಉಪಾಧ್ಯಕ್ಷ ಎನ್.ಕುಶಾಲಕುಮಾರ, ಪ್ರಮುಖರಾದ ಶಂಬಣ್ಣ ಸಾಹುಕಾರ, ಶಿವರಾಜ ಪಾಟೀಲ್ ವಕೀಲ, ವೀರೇಶ ಪಾಟೀಲ್ ಸಿದ್ರಾಂಪುರ, ಜಿ.ಮುರಳಿ, ಚಂದ್ರಪ್ಪ ಇತರರಿದ್ದರು.
ಸಿಂಧನೂರು: ಸರ್ಕಾರದಿಂದ ತೆರೆದಿರುವ ಜೋಳ ಖರೀದಿ ಕೇಂದ್ರದಲ್ಲಿ ಬೆಳೆ ತಿದ್ದುಪಡಿ ಮಾಡಿ ನೋಂದಾಯಿಸಿದ್ದ ಅನರ್ಹರ ಜತೆಗೆ ಅರ್ಹರ ಎಫ್‌ಐಡಿ ಕೂಡ ಲಾಕ್ ಆಗಿದ್ದು, ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ತಾಲೂಕಿನ ಜೋಳ ಖರೀದಿ ಕೇಂದ್ರದಲ್ಲಿ ಈ ಹಿಂದಿನಿಂದಲೂ ಅಕ್ರಮಗಳು ನಡೆದಿದ್ದು, ಅರ್ಹ ರೈತರಿಗಿಂತ ಅನರ್ಹರು ಖರೀದಿ ಕೇಂದ್ರದಲ್ಲಿ ನೋಂದಣಿ ಪಡೆದು ದಾಖಲೆ ಪ್ರಮಾಣದಲ್ಲಿ ಜೋಳ ಖರೀದಿ ಮಾಡಿದ್ದಿದೆ. ಸದ್ಯ ತಾಲೂಕಿನಲ್ಲಿ ಒಟ್ಟು 19,998 ಜನ ರೈತರು ನೋಂದಣಿಯಾಗಿದ್ದು, ಇದರಲ್ಲಿ 1,498 ಜನ ಜೋಳ ಬೆಳೆಯದವರು ಹಾಗೂ ರೈತರಲ್ಲದವರು ಎಂದು ತಾಲೂಕು ಆಡಳಿತ ರಚಿಸಿದ್ದ ವಿಶೇಷ ತನಿಖಾ ತಂಡ ಪತ್ತೆ ಹಚ್ಚಿದೆ.
ತುರ್ತು ಕ್ರಮ ಕೈಗೊಂಡ ತಾಲೂಕು ಆಡಳಿತ 1,498 ಜನ ರೈತರ ಖರೀದಿ ಪ್ರಕ್ರಿಯೆ ಎಫ್‌ಐಡಿ ಲಾಕ್ ಮಾಡಿದ್ದು, ಇದರಲ್ಲಿ ಅರ್ಹ ರೈತರು ಕೂಡ ಸೇರಿಕೊಂಡಿದ್ದಾರೆ. ಬಾದರ್ಲಿ, ಅಲಬನೂರಿನಲ್ಲಿಯೂ 50-60 ಜನ ಅರ್ಹ ರೈತರ ಎಫ್‌ಐಡಿ ಲಾಕ್ ಆಗಿದ್ದು, ಖರೀದಿಗೆ ಅವಕಾಶ ಇಲ್ಲ. ಇದರಿಂದ ರೈತರು ಗೊಂದಲದಲ್ಲಿದ್ದಾರೆ. ವಾಸ್ತವದಲ್ಲಿ ರೈತರು ಮೂರ‌್ನಾಲ್ಕು ಸ.ನಂ.ನಲ್ಲಿ ಆಸ್ತಿ ಹೊಂದಿದ್ದು, ಅಲ್ಲಿ ಬೇರೆ ಬೆಳೆ ಬೆಳೆದಿದ್ದರೂ, ಎಫ್‌ಐಡಿ ಲಾಕ್ ಆಗಿದೆ. ಆದ್ದರಿಂದ ಕೂಡಲೇ ಈ ಸಮಸ್ಯೆ ಪರಿಹರಿಸಿ ಅರ್ಹ ರೈತರಿಗೆ ಅನುಕೂಲ ಮಾಡಿಕೊಡಬೇಕೆಂಬ ಒತ್ತಾಯ ಕೇಳಿಬಂದಿದೆ.
"
ಸಿಂಧನೂರು ತಾಲೂಕಿನಲ್ಲಿ ಪಹಣಿಯಲ್ಲಿ ಬೆಳೆ ತಿದ್ದುಪಡಿ ಮಾಡಿಸಿ ಜೋಳ ಬೆಳೆದಿದ್ದಾಗಿ ತೋರಿಸಿದ್ದ 1,498 ಜನರನ್ನು ಪತ್ತೆ ಹಚ್ಚಲಾಗಿದೆ. ಪಟ್ಟಿ ಪರಿಶೀಲಿಸಿ, ಅರ್ಹ ರೈತರ ಜೋಳ ಖರೀದಿಗೆ ಅವಕಾಶ ನೀಡಲಾಗುವುದು. ರೈತರು ಆತಂಕಗೊಳ್ಳುವ ಅಗತ್ಯವಿಲ್ಲ.