ಅವೈಜ್ಞಾನಿಕ ನೀತಿಗಳಿಂದ ಕೃಷಿಕರಿಗೆ ಸಂಕಷ್ಟ

ದೇವದುರ್ಗ ತಾಲೂಕು ಮುಂಡರಗಿಯಲ್ಲಿ ರೈತ ಸಂಘದ ನಾಮಫಲಕವನ್ನು ರಾಜ್ಯ ಗೌರವ ಅಧ್ಯಕ್ಷ ಚಾಮರಸ ಮಾಲಿಪಾಟೀಲ್ ಅನಾವರಣಗೊಳಿಸಿದರು.
ದೇವದುರ್ಗ ತಾಲೂಕು ಮುಂಡರಗಿಯಲ್ಲಿ ರೈತ ಸಂಘದ ನಾಮಫಲಕವನ್ನು ರಾಜ್ಯ ಗೌರವ ಅಧ್ಯಕ್ಷ ಚಾಮರಸ ಮಾಲಿಪಾಟೀಲ್ ಅನಾವರಣಗೊಳಿಸಿದರು.
Published on
ದೇವದುರ್ಗ: ಸರ್ಕಾರಗಳ ಬಂಡವಾಳ ನೀತಿ, ಕಾರ್ಪೋರೇಟ್ ಕಂಪನಿಗಳ ಪರವಾದ ನಿಯಮಗಳು ಹಾಗೂ ಜನವಿರೋಧಿ ನೀತಿಯಿಂದ ರೈತರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ರೈತರು ಸೌಲಭ್ಯ ಪಡೆಯಲು ಒಗ್ಗಟ್ಟಾಗಬೇಕು. ಸಂಘಟನೆಯಿಂದ ಮಾತ್ರ ಒಕ್ಕಲುತನ, ರೈತರು ಉಳಿಯಲು ಸಾಧ್ಯ ಎಂದು ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಹೇಳಿದರು. 
ತಾಲೂಕಿನ ಮುಂಡರಗಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ರೈತರ ಸಭೆ ಹಾಗೂ ಸಂಘದ ಗ್ರಾಮ ಘಟನೆ ರಚನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಧುನಿಕ ಯುಗದಲ್ಲಿ ರೈತರು ಒಕ್ಕಲುತನ ಮಾಡುವುದು ದೊಡ್ಡ ಸವಾಲು. ದಿನೇದಿನೆ ಬೆಲೆ ಏರಿಕೆಯಾಗುತ್ತಿದ್ದು, ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆಯೇ ಸಿಗುತ್ತಿಲ್ಲ. ಸಣ್ಣಪುಟ್ಟ ಕಂಪನಿ ತಯಾರಿಸುವ ಪ್ರತಿ ವಸ್ತುವಿಗೂ ನಿಗದಿತ ಬೆಲೆಯಿದೆ. ಆದರೆ, ರೈತರು ಬೆಳೆಯುವ ಬೆಳೆಗೆ ಸೂಕ್ತ ಬೆಲೆ ಇಲ್ಲ. ಆಳುವ ಸರ್ಕಾರಗಳ ಅವೈಜ್ಞಾನಿಕ ನೀತಿಗಳೇ ಸಮಸ್ಯೆಗೆ ಕಾರಣ. ಹೀಗಾಗಿ ರೈತರು ಕೃಷಿಯಲ್ಲಿ ಹಲವು ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಕೃಷಿಕರು ಸರ್ಕಾರಗಳನ್ನು ಎಚ್ಚರಿಸಲು ಒಗ್ಗಟ್ಟಾಗಬೇಕು ಎಂದರು.
ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಇಂಗಳದಾಳ ಮಾತನಾಡಿ, ದೇವರು ಕೊಟ್ಟರೂ ಪೂಜಾರಿ ಕೊಡಲ್ಲ ಎನ್ನುವ ಸ್ಥಿತಿ ರೈತರಿಗೆ ಬಂದೊದಗಿದೆ. ಜಲಾಶಯದಲ್ಲಿ ನೀರಿದ್ದರೂ ಅಧಿಕಾರಿಗಳು ಸರಿಯಾಗಿ ನಾಲೆಗೆ ನೀರು ಹರಿಸುತ್ತಿಲ್ಲ. ಇದರಿಂದ ಟೇಲೆಂಡ್ ಮಾತ್ರವಲ್ಲ ಕಾಲುವೆ ನಂಬಿದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಐದು ವರ್ಷ ಕಳೆದರೂ ಬಲದಂಡೆ ನಾಲೆ ಆಧುನೀಕರಣ ಹಾಗೂ ಉಪಕಾಲುವೆ ನವೀಕರಣ ಕಾಮಗಾರಿ ಪೂರ್ಣಗೊಂಡಿಲ್ಲ. ನೀರಿನಂತೆ ಹಣ ಖರ್ಚಾದರೂ ಕಾಲುವೆ ಅಭಿವೃದ್ಧಿ ಕಂಡಿಲ್ಲ ಎಂದು ದೂರಿದರು. 
ಪ್ರಮುಖರಾದ ಮುದ್ದಣ್ಣ ತಾತ, ಶಿವಪ್ರಸಾದ್ ತಾತ, ಸಿದ್ದಣ್ಣ ತಾತ, ಮಲ್ಲಣ್ಣ ತಾತ, ಇಂದ್ರಕುಮಾರ, ರೈತ ಸಂಘದ ಮುಖಂಡರಾದ ದೇವರಾಜ್ ನಾಯಕ ಹನುಮಗೌಡ ಜಾಲಹಳ್ಳಿ, ಹಾಜಿ ಮಸ್ತಾನ್, ಮಲ್ಲಣ್ಣ ಗೌಡೂರು, ಬ್ರಹ್ಮಯ್ಯ ಆಚಾರ್, ಉಮಣ್ಣ ನಾಯಕ, ಶಾಂತಮೂರ್ತಿ ಸ್ವಾಮಿ, ಹುಚ್ಚಣ್ಣ, ಮುದ್ದಣ್ಣ ನಾಯಕ, ತಿಮ್ಮಣ್ಣ ನಾಯಕ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net