ಹತ್ತಿ ಮಾರಾಟಕ್ಕೆ ರೈತರು ಹೈರಾಣ

ಚಾಮರಸ ಮಾಲೀಪಾಟೀಲ್ ಗೌರವಾಧ್ಯಕ್ಷ, ರಾಜ್ಯ ರೈತ ಸಂಘ ರಾಯಚೂರು
ಚಾಮರಸ ಮಾಲೀಪಾಟೀಲ್ ಗೌರವಾಧ್ಯಕ್ಷ, ರಾಜ್ಯ ರೈತ ಸಂಘ ರಾಯಚೂರು
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯಲ್ಲಿ ಹತ್ತಿ ಬೆಳೆಗಾರರಿಗೆ ಒಂದರ ಮೇಲೊಂದರಂತೆ ಸಮಸ್ಯೆಗಳು ಎದುರಾಗುತ್ತಿದ್ದು, ಬಗೆಹರಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಪ್ರವಾಹ, ಅತೀವೃಷ್ಠಿ ಬಳಿಕ ಮಾರುಕಟ್ಟೆ ಸಮಸ್ಯೆ, ಈಗ ಹತ್ತಿ ಖರೀದಿ ಕೇಂದ್ರದಲ್ಲಿ ಭಾಷೆ, ನೋಂದಣಿ ಸೇರಿ ಇಡೀ ವ್ಯವಸ್ಥೆಯೇ ಸಮಸ್ಯೆಗಳ ಆಗರವಾಗಿದೆ. ಇದರಿಂದ ಬೇಸತ್ತ ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಸಂಕಷ್ಟಕ್ಕೆ ಸಿಲುಕಿದ್ದಾರೆ.
  • ಕುಸಿದ ಬೆಲೆ
ರಾಯಚೂರು
ಜಿಲ್ಲೆಯಲ್ಲಿ ಹತ್ತಿ ಬೆಳೆಗಾರರಿಗೆ ಒಂದರ ಮೇಲೊಂದರಂತೆ ಸಮಸ್ಯೆಗಳು ಎದುರಾಗುತ್ತಿದ್ದು, ಬಗೆಹರಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಪ್ರವಾಹ, ಅತೀವೃಷ್ಠಿ ಬಳಿಕ ಮಾರುಕಟ್ಟೆ ಸಮಸ್ಯೆ, ಈಗ ಹತ್ತಿ ಖರೀದಿ ಕೇಂದ್ರದಲ್ಲಿ ಭಾಷೆ, ನೋಂದಣಿ ಸೇರಿ ಇಡೀ ವ್ಯವಸ್ಥೆಯೇ ಸಮಸ್ಯೆಗಳ ಆಗರವಾಗಿದೆ. ಇದರಿಂದ ಬೇಸತ್ತ ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅತೀಯಾದ ಮಳೆ, ಪ್ರವಾಹದಿಂದ ಜಿಲ್ಲೆಯ ರೈತರು ತಮ್ಮ ಸಾಕಷ್ಟು ಬೆಳೆಯನ್ನು ಕಳೆದುಕೊಂಡಿದ್ದಾರೆ. ವೈಮಾನಿಕ ಸಮೀಕ್ಷೆ ನಡೆಸಿದ ರಾಜ್ಯದ ಮುಖ್ಯಮಂತ್ರಿಗಳು ಬೆಳೆ ಹಾನಿ ಪರಿಹಾರ ಘೋಷಿಸಿ ತಿಂಗಳು ಕಳೆದರು ರೈತರ ಖಾತೆಗೆ ಇನ್ನೂ ಪರಿಹಾರದ ಹಣ ಬಂದಿಲ್ಲ. ಈ ಮಧ್ಯೆ ರೈತರ ಅನುಕೂಲಕ್ಕಾಗಿ ಭಾರತೀಯ ಹತ್ತಿ ನಿಗಮ ಸಿಸಿಐನಿಂದ ಹತ್ತಿ ಖರೀದಿ ಕೇಂದ್ರ ಆರಂಭವಾಗಿದ್ದರು, ಸಮಸ್ಯೆಗಳು ಮಾತ್ರ ರೈತರನ್ನು ಕಂಗೆಡಿಸಿವೆ. ಹತ್ತಿ ಖರೀದಿ ಕೇಂದ್ರದಲ್ಲಿ ತೆಲುಗು ಭಾಷಿಕ ಸಿಬ್ಬಂದಿ ಇರುವುದರಿಂದ ರೈತರ ಸಮಸ್ಯೆ ಕೇಳುವವರಿಲ್ಲ, ಪರಿಹಾರ ಒದಗಿಸುವವರು ಇಲ್ಲದಂತಾಗಿದೆ. ತೆಲುಗು ಭಾಷೆ ಬಾರದ ರೈತರು ಹತ್ತಿ ಮಾರಾಟವಾಗದೆ ದಿನಗಟ್ಟಲೇ ಕಾಯುವಂತಾಗಿದೆ.

ಏನೀದು ಸಮಸ್ಯೆ?

ಸತತ ಮಳೆಯಿಂದ ಹತ್ತಿಯಲ್ಲಿ ತೇವಾಂಶ ಹೆಚ್ಚಾಗಿದ್ದು, ಮಾರುಕಟ್ಟೆಯಲ್ಲಿ ಉತ್ತಮ ದರ ಸಿಗುತ್ತಿಲ್ಲ. ಸರ್ಕಾರ ಆರಂಭಿಸಿದ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಬೇಕೆಂದರೆ ಅಲ್ಲಿ ವಿಧಿಸಿರುವ ನಿಯಮಗಳು ಅಡ್ಡಿಯಾಗುತ್ತಿದೆ. ಈ ಬಾರಿ ಜಿಲ್ಲೆಯ 7 ತಾಲೂಕಿನಲ್ಲಿ ಒಟ್ಟು 13 ಸಿಸಿಐ ಖರೀದಿ ಕೇಂದ್ರಗಳನ್ನು ತೆರೆದಿದೆ. ಆದರೆ, ನೋಂದಣಿ ಪ್ರಕ್ರಿಯೆ ಬೇಗ ಮುಗಿದರೂ ಈ ಬಾರಿ ರೈತರು ಬೇಕಾಬಿಟ್ಟಿ ಹತ್ತಿ ತರುವಂತಿಲ್ಲ. ರೈತರ ಹೆಸರು ನೋಂದಣಿ ಇದಕ್ಕಿಂತಲೂ ದೊಡ್ಡ ಸಮಸ್ಯೆಯಾಗಿದೆ. ಕಪಾಸ್ ಕಿಸಾನ್ ಮೊಬೈಲ್ ಅಪ್ಲಿಕೇಶನ್ ಮೂಲಕ ರೈತರು ಹೆಸರು ನೋಂದಾಯಿಸಿಕೊಂಡು ಹತ್ತಿ ಮಾರಾಟ ಮಾಡಬೇಕು. ಆದರೆ ನೋಂದಣಿಯಾಗದೆ ಸ್ಲಾಟ್ಸಿಗದೆ ರೈತರು ಒದ್ದಾಡುತ್ತಿದ್ದಾರೆ. ಕೆಲವೇ ಸೆಕೆಂಡ್‌ಗಳಲ್ಲಿ ನೋಂದಣಿ ಮಾಡಿಕೊಳ್ಳಬೇಕಿರುವುದರಿಂದ ರೈತರು ಗೊಂದಲಕ್ಕೀಡಾಗುತ್ತಿದ್ದಾರೆ. ಅಲ್ಲದೇ ರಾತ್ರಿ ವೇಳೆ ಕೆಲವೇ ಹೊತ್ತು ಮಾತ್ರ ನೊಂದಣಿಗೆ ಅವಕಾಶ ಸಿಗುತ್ತಿರುವುದರಿಂದ ರೈತರು ದಿಕ್ಕುಕಾಣದಂತಾಗಿದ್ದಾರೆ. ನೋಂದಣಿ ಪ್ರಕ್ರಿಯೆ ಸರಳಗೊಳಿಸಿ ರೈತರ ಹತ್ತಿ ಖರೀದಿಸಬೇಕೆಂದು ಒತ್ತಾಯಿಸಿ ಬೀದಿಗಿಳಿದು ಹೋರಾಟ ನಡೆಸಿದ್ದಾರೆ.

ಕುಸಿದ ಬೆಲೆ

ಈ ಬಾರಿ ಅಕಾಲಿಕ ಮಳೆ ಹೆಚ್ಚಾಗಿ ಸುರಿದ ಪರಿಣಾಮ ನಾನಾ ಕಾರಣಗಳಿಂದ ರೈತರು ಹತ್ತಿಗೆ ಲಕ್ಷಾಂತರ ರೂ. ಖರ್ಚು ಮಾಡಿ ಕೈ ಸುಟ್ಟುಕೊಂಡಿದ್ದಾರೆ. ಅದರ ಜತೆಗೆ ಈಗ ಕೂಲಿಕಾರರ ಸಮಸ್ಯೆ ಎದುರಾಗಿದ್ದು, ಕೆಜಿ ಹತ್ತಿ ಬಿಡಿಸಲು 15 ರೂ. ಕೊಡುತ್ತೇವೆಂದರೂ ಕೆಲಸಗಾರರು ಸಿಗುತ್ತಿಲ್ಲ. ಸತತ ಮಳೆಯಿಂದ ಆಗ ಹತ್ತಿ ಬಿಡಿಸಲಾಗಲಿಲ್ಲ. ಈಗ ಕೂಲಿಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಉತ್ತಮ ಬೆಲೆ ಸಿಕ್ಕರೆ ಮಾತ್ರ ರೈತ ಬಾಳು ಹಸನಾಗಲಿದೆ.
ಜತೆಗೆಖರೀದಿ ಕೇಂದ್ರಗಳಲ್ಲಿ 7,710ರಿಂದ 8,110 ರೂ.ವರೆಗೆ ದರ ನಿಗದಿ ಮಾಡಲಾಗಿದೆ. ಆದರೆ, ಆರಂಭದಲ್ಲಿ ಆಂಧ್ರ ಮತ್ತು ತೆಲಂಗಾಣದಿಅದ ಭಾರೀ ಪ್ರಮಾಣದಲ್ಲಿ ಹತ್ತಿ ಆವಕವಾಗಿದ್ದು, ಉತ್ತಮ ಬೆಲೆ ನೀಡಿ ನಮ್ಮ ವರ್ತಕರೇ ಖರೀದಿ ಮಾಡಿದ್ದಾರೆ. ಈಗ ಸ್ಥಳೀಯ ರೈತರ ಹತ್ತಿ ಮಾರುಕಟ್ಟೆಗೆ ಬರುತ್ತಿದ್ದು, ಬೇಕಾಬಿಟ್ಟಿ ದರಕ್ಕೆ ಕೇಳುತ್ತಿದ್ದಾರೆ. ಈಗಲೂ ನಿತ್ಯ 40 ಸಾವಿರ ಕ್ವಿಂಟಲ್ ಆಸುಪಾಸು ಹತ್ತಿ ಆವಕ ಆಗುತ್ತಿದೆ. ಆದರೆ, 5800 ರೂ. ರಿಂದ 6500 ರೂ. ದರ ಮಾತ್ರ ಸಿಗುತ್ತಿದೆ. ರೈತರು ದರ ಹೆಚ್ಚಿಸುವಂತೆ ಕೇಳಿದರೆ ಬೇಕಾದರೆ ಕೊಡಿ ಇಲ್ಲವಾದರೆ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿ ಎನ್ನುತ್ತಿದ್ದಾರೆ. ಆದರೆ, ಖರೀದಿ ಕೇಂದ್ರಗಳಲ್ಲಿ ಮಾರಲು ನಿಯಮಗಳೇ ಅಡ್ಡಿಯಾಗಿ ಕುಳಿತಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net