ಲಿಂಗಸುಗೂರು ಎಪಿಎಂಸಿಯಲ್ಲಿ ತೊಗರಿ ಖರೀದಿ ಕೇಂದ್ರಕ್ಕೆ ಶಾಸಕ ಮಾನಪ್ಪ ವಜ್ಜಲ್ ಚಾಲನೆ ನೀಡಿದರು. ಎಪಿಎಂಸಿ ಅಧ್ಯಕ್ಷ ಅಮರೇಶ ಹಿರೇಹೆಸರೂರು, ನಿರ್ದೇಶಕ ಮಹಾದೇವಯ್ಯ ಸ್ವಾಮಿ ಗೌಡೂರು, ಅಮರೇಗೌಡ ಕೋಠಾ, ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಪಾಟೀಲ್, ಗಿರಿಮಲ್ಲನಗೌಡ ಪಾಟೀಲ್, ಹುಲ್ಲೇಶ ಸಾಹುಕಾರ, ಅಯ್ಯಪ್ಪ ಮಾಳೂರು, ಭೀಮಣ್ಣ ಹಿರೇಮನಿ, ಮುದುಕಪ್ಪ ನಾಯಕ, ಎಪಿಎಂಸಿ ಕಾರ್ಯದರ್ಶಿ ನೀಲಪ್ಪ ಶೆಟ್ಟಿ, ಹರೀಶ್ ಇದ್ದರು.
ಲಿಂಗಸುಗೂರು: ಕನಿಷ್ಠ ಬೆಂಬಲ ಬೆಲೆಯಲ್ಲಿ ಕೇಂದ್ರ ಸರ್ಕಾರ ತೊಗರಿ ಖರೀದಿಗೆ ಪ್ರತಿ ಕ್ವಿಂಟಾಲ್‌ಗೆ 8 ಸಾವಿರರೂ. ನಿಗದಿ ಮಾಡಿದ್ದು, ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್‌ಗೆ 500 ರೂ. ಪ್ರೋತ್ಸಾಹಧನ ನೀಡಬೇಕು ಎಂದು ಶಾಸಕ ಮಾನಪ್ಪ ವಜ್ಜಲ್ ಒತ್ತಾಯಿಸಿದರು.
ಪಟ್ಟಣದ ಎಪಿಎಂಸಿಯಲ್ಲಿ ಮಂಗಳವಾರ ತೊಗರಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ತೊಗರಿಗೆ 7 ಸಾವಿರ ರೂ.ಯಂತೆ ಖರೀದಿಸಲಾಗುತ್ತಿದೆ.
ಕೇಂದ್ರ ಸರ್ಕಾರ 8 ಸಾವಿರ ರೂ. ನೀಡುವ ಮೂಲಕ ರೈತರಿಗೆ ಅನುಕೂಲ ಮಾಡಲಾಗಿದೆ. ಎಲ್ಲಿಯೂ ಸಿಗದ ಭಾಗ್ಯ ಕರ್ನಾಟಕದ ರೈತರಿಗೆ ಸಿಕ್ಕಿದೆ. ಪ್ರತಿ ಎಕರೆಗೆ 4 ಕ್ವಿಂಟಾಲ್‌ನಂತೆ ತೊಗರಿ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ. ಮಾರಾಟ ಮಾಡಿದ ರೈತರಿಗೆ 15 ದಿನಗಳಲ್ಲಿ ಅವರ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ ಎಂದರು.