ಮಹತ್ತರ ಮಾನವೀಯ ಸೇವೆ ನೇತ್ರದಾನ

ಸಿಂಧನೂರು ತಾಲೂಕಿನ ಜವಳಗೇರಾ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ನೇತ್ರದಾನ ಪಾಕ್ಷಿಕ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಿಂಧನೂರು ತಾಲೂಕಿನ ಜವಳಗೇರಾ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ನೇತ್ರದಾನ ಪಾಕ್ಷಿಕ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Published on

ಸಿಂಧನೂರು: ಮರಣದ ನಂತರ ನೇತ್ರದಾನ ಮಾಡುವ ಮೂಲಕ ಇಬ್ಬರು ದೃಷ್ಟಿಹೀನರ ಬದುಕಿಗೆ ಬೆಳಕು ನೀಡಬಹುದು. ಪ್ರತಿಯೊಬ್ಬರೂ ನೇತ್ರದಾನದ ಬಗ್ಗೆ ಜಾಗೃತಿ ಹೊಂದಿ ಕುಟುಂಬದವರೊಂದಿಗೆ ಚರ್ಚಿಸಿ ಪ್ರತಿಜ್ಞೆ ಕೈಗೊಳ್ಳಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಹೇಳಿದರು.

ಜವಳಗೇರಾ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ನೇತ್ರದಾನ ಪಾಕ್ಷಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಕಾರ್ನಿಯಾ ಸಂಬಂಧಿತ ಸಮಸ್ಯೆಗಳು, ಗಾಯ, ಸೋಂಕು, ಅಪೌಷ್ಟಿಕ ಹಾಗೂ ಜನ್ಮಜಾತ ಅಸ್ವಸ್ಥತೆಯಿಂದ ಹಲವರು ದೃಷ್ಟಿ ಕಳೆದುಕೊಳ್ಳುತ್ತಿದ್ದಾರೆ. ಇಂಥವರಿಗೆ ದೃಷ್ಟಿ ನೀಡುವ ಮಹತ್ತರ ಮಾನವೀಯ ಸೇವೆಯೇ ನೇತ್ರದಾನವಾಗಿದೆ ಎಂದರು.
ಮರಣದ ನಂತರ 6ರಿಂದ 8ಗಂಟೆಯೊಳಗೆ ನೇತ್ರದಾನ ಮಾಡಬಹುದಾಗಿದೆ. ಕಸಿ ಪ್ರಕ್ರಿಯೆಯಲ್ಲಿ ಕಾರ್ನಿಯಾವನ್ನು ಮಾತ್ರ ಬಳಸಲಾಗುತ್ತದೆ. ನೇತ್ರ ಸಂಗ್ರಹಕ್ಕೆ ಸುಮಾರು 15ರಿಂದ 20 ನಿಮಿಷ ಬೇಕಾಗುತ್ತದೆ. ಕನ್ನಡಕ ಧರಿಸುವವರು, ಮಧುಮೇಹಿಗಳು, ಅಧಿಕ ರಕ್ತದೊತ್ತಡ ಹೊಂದಿರುವವರು ಹಾಗೂ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾದವರೂ ನೇತ್ರದಾನ ಮಾಡಬಹುದು ಎಂದು ತಿಳಿಸಿದರು.
]
ಉಪನ್ಯಾಸಕ ಡಾ.ನಾರಾಯಣ ಮಾತನಾಡಿ, ಮರಣಾನಂತರ ದೇಹವನ್ನು ಸುಡುವ ಅಥವಾ ಹೂಳುವ ಮುನ್ನ ಕಣ್ಣುಗಳನ್ನು ದಾನ ಮಾಡಬೇಕು. ನೇತ್ರದಾನ ಮಾನವೀಯತೆಯ ಅತ್ಯುನ್ನತ ಸೇವೆಯಾಗಿದ್ದು, ವಿದ್ಯಾರ್ಥಿಗಳು ಕುಟುಂಬದವರಲ್ಲಿ ಈ ಕುರಿತು ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು. ಪ್ರಾಚಾರ್ಯ ಬಸವಲಿಂಗಯ್ಯ ಸ್ವಾಮಿ, ಆರೋಗ್ಯ ನಿರೀಕ್ಷಣಾಧಿಕಾರಿ ಅಂಬಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net