ದೇವದುರ್ಗ: ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ರಚಿಸಿರುವ ವಚನಗಳು ಬದುಕಿಗೆ ದಾರಿದೀಪವಾಗಿವೆ ಎಂದು ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಹೇಳಿದರು.
ಪಟ್ಟಣದ ಸಾರ್ವಜನಿಕ ಕ್ಲಬ್ ಮೈದಾನದಲ್ಲಿ ಕಸಾಪದಿಂದ ಮಂಗಳವಾರ ಹಮ್ಮಿಕೊಂಡಿದ್ದ ಕಾಯಕ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶರಣರು ತೋರಿದ ಸನ್ಮಾರ್ಗದಲ್ಲಿ ನಡೆದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಜೇಡರ ದಾಸಿಮಯ್ಯ, ಮಾದರ ಚನ್ನಯ್ಯ, ಸಮಗಾರ ಹರಳಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಉರಿಲಿಂಗ ಪೆದ್ದಿ ಅವರು ಬಸವಣ್ಣನವರ ಸಮಕಾಲೀನ ಶರಣರು.
ಬಸವಣ್ಣ ಅವರ ಜತೆ ಧಾರ್ಮಿಕ ಹಾಗೂ ವೈಚಾರಿಕ ಕ್ರಾಂತಿಗೆ ಮುಂದಾದರು. ಎಲ್ಲರೂ ಶರಣರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು. ಚಮ್ಮಾರಿಕೆ ಮಾಡುವ ಲಕ್ಷ್ಮಣ ತೋರಣದಿನ್ನಿ ಅವರನ್ನು ಸನ್ಮಾನಿಸಲಾಯಿತು.
ತಾಲೂಕು ಅಧ್ಯಕ್ಷ ಎಚ್.ಶಿವರಾಜ, ಪ್ರಮುಖರಾದ ರಾಜಶೇಖರ ಹರವಿ, ಶರಣು, ಜಿ.ಪಂಪಣ್ಣ, ಸಂಗಮೇಶ ಹರವಿ, ತಿಪ್ಪಣ್ಣ, ಸಾಗರ, ವಿನಯ್ ಕುಲಕರ್ಣಿ ಇತರರಿದ್ದರು.