ರಾಜ್ಯದ ಚಳಿ ಬಿಡಿಸುತ್ತಿರುವ ವಿದ್ಯುತ್ ಬೇಡಿಕೆ ಕೃಷಿ ಕ್ಷೇತ್ರದಲ್ಲಿ ಹೆಚ್ಚಿದ ಕರೆಂಟ್ ಬಳಕೆ, ವಾತಾವರಣದಲ್ಲಿ ತಂಪಿದ್ದರೂ ಗಣನೀಯ ಏರಿಕೆ

RTPS
RTPS
Published on

ರಾಯಚೂರು

ರಾಜ್ಯದಲ್ಲಿ ಚಳಿಯ ವಾತಾವರಣನ ಮೂಡಿದ್ದು ಮೈಕೊರೆಯುವ ಚಳಿಗೆ ಜನತೆ ಗಡಗಡ ನಡುತ್ತಿದ್ದಾರೆ. ಚಳಿಯ ಮಧ್ಯೆಯೂ ರಾಜ್ಯದ ವಿದ್ಯುತ್ ಬೇಡಿಕೆ ಗಣನೀಯ ಏರಿಕೆ ಕಂಡಿದ್ದು, ಬೇಸಿಗೆಯ ವೇಳೆಯಲ್ಲಿ ಕಂಡುಬರುವ ರೀತಿಯಲ್ಲಿ ವಿದ್ಯುತ್ ಬಳಕೆ ಹೆಚ್ಚಳ ಕಂಡಿದೆ. ಮಳೆಯ ಅಬ್ಬರ ತಗ್ಗಿದ್ದರಿಂದ ಕೃಷಿ ಕ್ಷೇತ್ರದಲ್ಲಿ ವಿದ್ಯುತ್ ಬಳಕೆ ಹೆಚ್ಚಳ ಕಂಡಿದ್ದು ಬೇಡಿಕೆಯು ೧೪ ಸಾವಿರ ಮೆವಾ ಗಡಿ ಮಂಗಳವಾರ ದಾಟಿದೆ.
ರಾಜ್ಯದಲ್ಲಿ ಕಳೆದೊಂದು ವಾರದಿಂದ ಮಳೆಯ ಅಬ್ಬರ ಸಂಪೂರ್ಣ ಕಡಿಮೆಯಾಗಿದೆ. ಹಿಂಗಾರು ಮಳೆಯ ಆರಂಭ ಇನ್ನೂ ಆಗಬೇಕಿದ್ದು, ಮುಂಗಾರು ಹಂಗಾಮಿನಲ್ಲಿ ಸುರಿದ ಅಬ್ಬರದ ಮಳೆಯಿಂದಾಗಿ ಚಳಿಯ ಅಬ್ಬರ ಜೋರಾಗಿದೆ. ರಾಜ್ಯದ ಬಹುತೇಕ ಕಡೆ ತಾಪಮಾನವು ತೀವ್ರ ಕುಸಿತ ಕಂಡಿದೆ. ಆದರೂ ವಿದ್ಯುತ್ ಬಳಕೆ ಮಾತ್ರ ಏರಿಕೆಯಾಗಿರುವುದು ಅಚ್ಚರಿಗೆ ದಾರಿ ಮಾಡಿದೆ.

ವಿದ್ಯುತ್ ಬಳಕೆ ಹೆಚ್ಚಳ

ರಾಜ್ಯದಲ್ಲಿ ಸಾಮಾನ್ಯವಾಗಿ ಬೇಸಿಗೆಯ ದಿನಗಳಲ್ಲಿ ವಿದ್ಯುತ್ ಬಳಕೆ ಏರಿಕೆ ಕಾಣುವುದು ರೂಢಿ. ಆದರೆ ಪ್ರಸಕ್ತ ವರ್ಷ ಬೇಸಿಗೆಗೂ ಮೊದಲೇ ವಿದ್ಯುತ್ ಬಳಕೆ ಗಣನೀಯ ಏರಿಕೆ ಕಂಡಿದೆ. ಕಳೆದ ವಾರದ ಆರಂಭದಲ್ಲಿ ೧೦ ರಿಂದ ೧೨ ಸಾವಿನ ಮೆವಾ ವರೆಗಿದ್ದ ವಿದ್ಯುತ್ ಬೇಡಿಕೆಯು ಇದೀಗ ೧೪ ಸಾವಿರ ಮೆವಾ ವರೆಗೆ ಬಂದು ತಲುಪಿದೆ.
ರಾಜ್ಯದಲ್ಲಿ ಪ್ರಸಕ್ತ ವರ್ಷ ಸಾಕಷ್ಟು ಮಳೆಯಾಗಿದ್ದು, ಜಲಾಶಯಗಳು ತುಂಬಿರುವುದರಿಂದ ಜಲ ವಿದ್ಯುತ್‌ ಉತ್ಪಾದನೆಗೆ ಕೊರತೆಯೇನಿಲ್ಲ. ಆದರೆ ಬೇಸಿಗೆಗೂ ಮೊದಲೇ ವಿದ್ಯುತ್ ಬೇಡಿಕೆ ಗಣನೀಯ ಏರಿಕೆ ಕಂಡಿರುವುದು ಒತ್ತಡಕ್ಕೆ ದಾರಿ ಮಾಡುವ ಆತಂಕ ಎದುರಾಗಿದೆ.

ಕೃಷಿಯಲ್ಲಿ ಬಳಕೆ ಹೆಚ್ಚಳ

ರಾಜ್ಯದಲ್ಲಿ ಮಳೆಯ ಅಬ್ಬರ ತಗ್ಗಿದ್ದರಿಂದ ಕೃಷಿ ಕ್ಷೇತ್ರದಲ್ಲಿ ಅದರಲ್ಲೂ ನೀರೆತ್ತುವ ಮೋಟಾರ್ ಪಂಪ್ ಗಳ ಬಳಕೆ ಹೆಚ್ಚಳವಾಗಿರುವುದು ವಿದ್ಯುತ್ ಬಳಕೆ ಪ್ರಮಾಣ ಹೆಚ್ಚಳಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಹೇಳಲಾಗಿದೆ. ಮಳೆ ಬೀಳುವಿಕೆ ತಗ್ಗಿದ್ದರಿಂದ ಬೆಳೆ ಗಳಿಗೆ ಕೊಳವೆಬಾವಿಗಳ ನೀರು ರೈತರು ಪಡೆಯುತ್ತಿರುವುದು ವಿದ್ಯುತ್ ಗೆ ಬೇಡಿಕೆ ಹೆಚ್ಚಿಸಿದೆ.
ವಾತಾವರಣದಲ್ಲಿ ಅತೀವ ಚಳಿ ಉಂಟಾಗಿರುವುದರಿಂದ ಗೃಹ ಬಳಕೆಯಲ್ಲಿಯೂ ವಿದ್ಯುತ್ ಬಳಕೆ ತುಸು ಹೆಚ್ಚಳವಾಗಿದ್ದು, ರಾಜ್ಯದ ದೈನಂದಿನ ಬೇಡಿಕೆಯು ೧೪ ಸಾವಿರ ಮೆವಾ ವರೆಗೆ ತಲುಪುವಂತಾಗಿದೆ ಎಂದು ಕೆಪಿಸಿ ಮೂಲಗಳು ಹೇಳಿವೆ.
ಸದ್ಯ ರಾಜ್ಯದ ಶಕ್ತಿ ಕೇಂದ್ರಗಳಲ್ಲಿ ವಿದ್ಯುತ್ ಉತ್ಪಾದನೆ ತೃಪ್ತಿದಾಯಕವಾಗಿದ್ದು, ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಐದು ಘಟಕಗಳಿಂದ ಒಟ್ಟು ೬೯೧ ಮೆವಾ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಅದೇ ರೀತಿ ಯರಮರಸ್ ನಲ್ಲಿ ಒಂದು ಘಟಕದಿಂದ ೪೨೮ ಮೆವಾ ಹಾಗೂ ಬಳ್ಳಾರಿಯ ಕುಡಿತಿನಿಯ ಬಿಟಿಪಿಎಸ್ ನಲ್ಲಿ ಎರಡು ಘಟಕಗಳಿಂದ ೫೫೦ ಮೆವಾ ವಿದ್ಯುತ್ ಉತ್ಪಾದಿಸಲಾಗುತ್ತಿದೆ.
ಈ ಮಧ್ಯೆ ರಾಜ್ಯದಲ್ಲಿ ಸೌರ ಹಾಗೂ ಪವನ ವಿದ್ಯುತ್ ಶಕ್ತಿ ಘಟಕಗಳು ಹೇರಳ ವಿದ್ಯುತ್ ಉತ್ಪಾದಿಸುತ್ತಿವೆ. ಸೌರ ವಿದ್ಯುತ್ ಘಟಕಗಳಿಂದ ೪೬೦೦ ಮೆವಾ ವಿದ್ಯುತ್ ದೊರೆಯುತ್ತಿದ್ದರೆ ಪವನ ವಿದ್ಯುತ್ ನಿಂದ ೩೦೦ ಮೆವಾ ಲಭ್ಯವಾಗುತ್ತಿದ್ದು ಜಲ ವಿದ್ಯುತ್ ಘಟಕಗಳಲ್ಲಿ ಸದ್ಯ ವಿದ್ಯುತ್ ಉತ್ಪಾದನೆ ಹೆಚ್ಚಿನ ರೀತಿಯಲ್ಲಿ ಮಾಡುತ್ತಿಲ್ಲ. ಬೇಸಿಗೆಯ ಕುಡಿಯುವ ನೀರಿನ ಬೇಡಿಕೆಗೆ ಪೂರೈಸಲು ಜಲವಿದ್ಯುತ್ ಘಟಕಗಳಲ್ಲಿ ವಿದ್ಯುತ್ ಒಟ್ಟು ೧೧೩೦ಮೆವಾ ಉತ್ಪಾದಿಸಲಾಗುತ್ತಿದೆ. ಇದೆಲ್ಲದರ ಹೊರತಾಗಿಯೂ ರಾಜ್ಯದಲ್ಲಿ ಮೈಕೊರೆಯುವ ಚಳಿಯಿದ್ದರೂ ವಿದ್ಯುತ್ ಬೇಡಿಕೆ ತೀವ್ರ ಏರಿಕೆ ಕಂಡಿದ್ದು ಚಳಿ ಬಿಡಿಸುವಂತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net