ಮಳೆಯ ಅಬ್ಬರಕ್ಕೆ ತಗ್ಗಿದ ವಿದ್ಯುತ್ ಬೇಡಿಕೆ

ರಾಯಚೂರಿನ ಆರ್‌ಟಿಪಿಎಸ್‌ನ ಹೊರನೋಟ
ರಾಯಚೂರಿನ ಆರ್‌ಟಿಪಿಎಸ್‌ನ ಹೊರನೋಟ
Published on

ಪ್ರಮುಖ ಮುಖ್ಯಾಂಶಗಳು

  • 13ಸಾವಿರ ಮೆವಾ ಗೆ ಇಳಿದ ಡಿಮಾಂಡ್
  • ತಾಪಾಮಾನದಲ್ಲಿ ತುಸು ಇಳಿಕೆ
  • ರಾಜ್ಯಾದ್ಯಂತ ಮಳೆಯ ಅಬ್ಬರ-
ರಾಯಚೂರು
ರಾಜ್ಯದ ನಾನಾ ಕಡೆ ದಿನವೂ ಧಾರಾಕಾರ ಮಳೆಯಾಗುತ್ತಿದೆ. ಅದರಿಂದ ಬೇಸಿಗೆಯ ಬಿರುಬಿಸಿಲ ದಿನದಲ್ಲಿ ಗಗನಕ್ಕೇರಿದ್ದ ವಿದ್ಯುತ್ ಬೇಡಿಕೆ ಗಣನೀಯ ಪ್ರಮಾಣದಲ್ಲಿ ತಗ್ಗಿದೆ. ಕೆಪಿಸಿ ಗೆ ಇದು ನಿರಾಳತೆ ತಂದಿದೆ.

ಹೌದು. ಮುಂಗಾರು ಪೂರ್ವ ಮಳೆಯ ಅಬ್ಬರ ರಾಜ್ಯವನ್ನು ನಿಧಾನವಾಗಿ ತಣ್ಣಗಾಗಿಸುತ್ತಿದೆ. ಬೇಸಿಗೆಯ ಬಿರು ಬಿಸಿಲ ತಾಪ ಕಡಿಮೆಯಾಗುತ್ತಿದೆ. ಪರಿಣಾಮ ವಿದ್ಯುತ್‌ಬಳಕೆ ಕಡಿಮೆಯಾಗಿ ಬೇಡಿಕೆ ಕುಸಿಯುತ್ತಿದೆ.

ಬೇಡಿಕೆ ಇಳಿಕೆ-
ಪ್ರಸಕ್ತ ಬೇಸಿಗೆಯಲ್ಲಿ ರಾಜ್ಯದ ದೈನಂದಿನ ಬೇಡಿಕೆಯು 18,800 ಮೆವಾ ವರೆಗೆ ತಲುಪಿ ಆತಂಕ ಮೂಡಿಸಿತ್ತು. ಜಲಾಶಯಗಳು ಬರಿದಾಗಿದ್ದರಿಂದ ಜಲ ವಿದ್ಯುತ್ ಘಟಕಗಳಲ್ಲಿ ಉತ್ತಾದನೆ ನಿಂತಿತ್ತು. ಥರ್ಮಲ್ ಘಟಕಗಳ ಮೇಲೆಯೇ ಒತ್ತಡ ಹೆಚ್ಚಾಗಿತ್ತು. ಉತ್ಪಾದನೆಯ ಒತ್ತಡದಿಂದಾಗಿ ಅನೇಕ ಸಲ ತಾಂತ್ರಿಕ ಸಮಸ್ಯೆಯಿಂದಾಗಿ ಘಟಕಗಳು ಉತ್ಪಾದನೆ ಸ್ಥಗಿತಗೊಳಿಸಿದ ಪ್ರಸಂಗಗಳು ನಡೆದಿದ್ದವು. ಕುಡಿಯುವ ನೀರು, ಕೃಷಿಗೂ ಥರ್ಮಲ್ ವಿದ್ಯುತ್ ಮೇಲೆ ನಿರ್ಭರ ಆಗುವಂತಾಗಿತ್ತು. ಪರಿಣಾಮ ಕೆಲ ವೇಳೆ ಅಘೋಷಿತ ಲೋಡ್ ಶೆಡ್ಡಿಂಗ್ ಅನುಭವಿಸುವಂತಾಗಿತ್ತು. ದೈನಂದಿನ ಬೇಡಿಕೆಯು 20,000ಮೆವಾ ನಿಂದ ಈಗ 13 ಸಾವಿರ ಮೆವಾ ಗೆ ಇಳಿದಿದೆ. ಪರಿಣಾಮ ವಿದ್ಯುತ್ ಕಡಿತದ ಸಮಸ್ಯೆಯೂ ನಿವಾರಣೆಯಾಗಿದೆ ಅಷ್ಟೇ ಅಲ್ಲ ರಾಜ್ಯದಲ್ಲಿ ಬೇಸಿಗೆಯಲ್ಲಿ ನಿರಂತರ ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿದ್ದ ಶಕ್ತಿನಗರ ಹಾಗೂ ಯರಮರಸ್‌ನಲ್ಲಿ ಉತ್ಪಾದನೆ ತಗ್ಗಿಸಲಾಗಿದೆ.


ರಾಜ್ಯಾದ್ಯಂತ ಮಳೆಯ ಅಬ್ಬರ-
ರಾಜ್ಯದಲ್ಲಿ ಜನವರಿ ಅಂತ್ಯದಿಂದಲೇ ವಿದ್ಯುತ್ ಬೇಡಿಕೆ ಏರಿಕೆಯಾಗಿ ಆತಂಕ ಸೃಷ್ಟಿಸಿತ್ತು. ಕಳೆದ ತಿಂಗಳು ಬಿಸಿಲ ತಾಪದಿಂದ ವಿದ್ಯುತ್ ಬೇಡಿಕೆ 18,800 ಮೆವಾ ಗೆ ತಲುಪಿತ್ತು. ಕೃಷಿಯಲ್ಲೂ ಪಂಪ್‌ಸೆಟ್ ಬಳಕೆ ಹೆಚ್ಚಳದಿಂದ ಬೇಡಿಕೆ ಗಗನಕ್ಕೇರಿತ್ತು. ಕಳೆದೊಂದು ವಾರದಿಂದ ನಾನಾ ಕಡೆ ದಿನವೂ ಸಂಜೆಯಾಗುತ್ತಿದ್ದಂತೆಯೇ ಧಾರಾಕಾರ ಮಳೆ ಸುರಿಯುತ್ತಿದ್ದು ಅದರಿಂದ ಕೃಷಿ ಹಾಗೂ ವಾಣಿಜ್ಯ, ಗೃಹ ಬಳಕೆ ವಿದ್ಯುತ್‌ನಲ್ಲಿ ಇಳಿಕೆ. ಮುಂಗಾರು ಪೂರ್ವ ಮಳೆಯಿಂದ ವಾತಾವರಣದಲ್ಲಿ ತಾಪಮಾನ ತುಸು ಇಳಿಕೆಯಾಗಿ ಎಸಿ,ಕೂಲರ್ ಗೃಹ ಬಳಕೆಯಲ್ಲಿ ಕಡಿತ ಆಗಿರೋದರಿಂದ ಬೇಡಿಕೆ ಕುಸಿದಿದೆ.


ತಾಪಮಾನ ಇಳಿಕೆ-
ಉತ್ತರ ಒಳನಾಡು, ಕರಾವಳಿ ಸೇರಿ ರಾಜ್ಯದ ವಿವಿಧೆಡೆ ಹಗುರದಿಂದ ಸಾಧಾರಣ ಮಳೆಯಾಗಿರುವುದರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತಾಪಮಾನದಲ್ಲಿ 3 ರಿಂದ 5 ಡಿಗ್ರಿ ಸೆಲ್ಸಿಯಸ್‌ನಷ್ಟು ಇಳಿಕೆಯಾಗಿದೆ. ಭಾರೀ ಬಿಸಿಲಿನಿಂದ ಕಂಗೆಟ್ಟಿದ್ದ ಜನತೆ ಸ್ವಲ್ಪ ನಿರಾಳರಾಗಿದ್ದಾರೆ. ರಾಜ್ಯದ ವಿವಿಧೆಡೆ ಮಳೆಯಾಗುತ್ತಿದ್ದು, ಗರಿಷ್ಠ ತಾಪಮಾನವು 40 ಡಿಗ್ರಿ ಸೆಲ್ಸಿಯಸ್‌ಗಿಂತ ಕೆಳಕ್ಕೆ ಇಳಿದಿದೆ. ರಾಯಚೂರು ಮತ್ತು ಸುತ್ತಮುತ್ತಲಿನಲ್ಲಿ ಮೋಡ ಕವಿದ ವಾತಾವರಣ ಮತ್ತು ತಂಪಾದ ಗಾಳಿ ಬೀಸುವ ಮೂಲಕ ಬಿಸಿಲಿನ ತಾಪಮಾನ ತಗ್ಗಿದೆ.




ಕೃಷಿಯಲ್ಲೂ ಬಳಕೆ ಕಡಿಮೆ-
ಮನೆ ಸೇರಿದಂತೆ ಕೈಗಾರಿಕೆಯಷ್ಟೆ ಕೃಷಿ ವಲಯಕ್ಕೆ ಹೆಚ್ಚಿನ ವಿದ್ಯುತ್ ಬೇಕಿದ್ದು, ಬೇಸಿಗೆ ದಿನಗಳಲ್ಲಿ ಬೇಡಿಕೆ ಹೆಚ್ಚಿರುತ್ತದೆ. ಅದರಲ್ಲೂ ರಾಜ್ಯದ ಶೇ.40 ರಷ್ಟು ಪ್ರದೇಶವು ಬೋರ್‌ವೆಲ್ ಅವಲಂಭಿತ. ಜತೆಗೆ ಎಲ್ಲ ತೋಟಗಾರಿಕೆ ಬೆಳೆಗಳು ಬೋರ್‌ವೆಲ್ ಆಧಾರಿತವಾಗಿದ್ದು, ಬೇಸಿಗೆಯ ದಿನಗಳಲ್ಲಿ ತೋಟಗಳನ್ನು ಉಳಿಸಿಕೊಳ್ಳಲು ವಿದ್ಯುತ್‌ಗೆ ಬೇಡಿಕೆ ಹೆಚ್ಚಾಗಿತ್ತು. ಸಾವಿರಾರು ಬೋರ್‌ವೆಲ್‌ಗಳಲ್ಲಿ ನೀರಿಲ್ಲದೆ ತೋಟಗಳು ಒಣಗಿ ಹೋದವು. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ವಿದ್ಯುತ್ ಒತ್ತಾಡ ಕಡಿಮೆಯಾಗಿದ್ದು, ರೈತರು ಕೃಷಿಯಲ್ಲಿ ವಿದ್ಯುತ್ ಬಳಕೆ ಕಡಿಮೆ ಮಾಡಿದ್ದಾರೆ.

ಥರ್ಮಲ್ ಮೇಲೆ ಒತ್ತಡ ಇಳಿಕೆ-
ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಕಡಿಮೆ ಆಗಿದ್ದರಿಂದ ಶಕ್ತಿನಗರದ ಆರ್‌ಟಿಪಿಎಸ್‌ನ ಎಂಟು ಘಟಕಗಳ ಪೈಕಿ 6 ಘಟಕದಲ್ಲಿ ಕೇವಲ 903 ಮೆವಾ ಉತ್ಪಾದನೆ ಮಾಡಲಾಗುತ್ತಿದೆ. ಅದೇ ರೀತಿ ಯರಮರಸ್‌ನ ವೈಟಿಪಿಎಸ್‌ನ ಎರಡು ಘಟಕಗಳಲ್ಲಿ 883 ಮೆವಾ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಥರ್ಮಲ್ ಘಟಕಗಳಿಂದ ಸದ್ಯ ಒಟ್ಟು 1786 ಮೆವಾ ವಿದ್ಯುತ್ ಉತ್ಪಾದಿಸುತ್ತಿದ್ದು, ಬೇಸಿಗೆಯಲ್ಲಿ ಉಂಟಾಗಿದ್ದ ವಿದ್ಯುತ್ ಕೊರತೆಯ ಭೀತಿ ವರ್ಷಧಾರೆಯಿಂದ ಮರೆಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net