ಲಿಂಗಸುಗೂರು: ಶಾಸಕ ಮಾನಪ್ಪ ವಜ್ಜಲ್ ಅವರನ್ನು ಕರೆದುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಭೇಟಿ ಮಾಡಿಸಿ ಮುದಗಲ್ ಪಟ್ಟಣದಲ್ಲಿ ಶಾಶ್ವತ ಕುಡಿವ ನೀರು ಯೋಜನೆಗೆ ಅಗತ್ಯ ಅನುದಾನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಭರವಸೆ ನೀಡಿದರು.
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಶುಕ್ರವಾರ ಶಾಸಕ ಮಾನಪ್ಪ ವಜ್ಜಲ್ ವಿಷಯ ಪ್ರಸ್ತಾಪಿಸಿ, ಮುದಗಲ್, ಲಿಂಗಸುಗೂರು, ಹಟ್ಟಿ ಪಟ್ಟಣಗಳಲ್ಲಿ ಕುಡಿವ ನೀರಿನ ತೊಂದರೆ ಇದೆ.
10 ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ಪಕ್ಕದಲ್ಲಿ ಕೃಷ್ಣಾ ನದಿ, ನಾರಾಯಣಪುರ ಜಲಾಶಯವಿದ್ದರೂ ಪರದಾಡುವಂತಾಗಿದ್ದು, ಪರಿಹಾರಕ್ಕೆ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಪಟ್ಟು ಹಿಡಿದರು.
ಇದಕ್ಕೆ ಸಚಿವ ಭೈರತಿ ಸುರೇಶ ಉತ್ತರಿಸಿ, ಲಿಂಗಸುಗೂರು, ಮುದಗಲ್, ಹಟ್ಟಿ ಪಟ್ಟಣಗಳಲ್ಲಿ ಕುಡಿವ ನೀರಿನ ಸಮಸ್ಯೆ ಇರುವುದು ಗಮನಕ್ಕಿದೆ. ಮುದಗಲ್ ಪಟ್ಟಣದಲ್ಲಿ ನೀರಿನ ತೊಂದರೆ ನಿವಾರಣೆಗೆ ದುಡ್ಡು ಕೇಳಿದ್ದೇವೆ.
ಮುದಗಲ್‌ನಲ್ಲಿ ಕುಡಿವ ನೀರಿನ ಯೋಜನೆ ಪೂರ್ಣಗೊಳಿಸಲು ಇನ್ನೂ 29 ಕೋಟಿ ಬೇಕಾಗಿದೆ. ಹಣಕಾಸು ಇಲಾಖೆ ಒಪ್ಪಿಗೆ ನೀಡಿದ ತಕ್ಷಣ ಮುಂದಿನ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಸಚಿವರ ಮಾತಿಗೆ ಒಪ್ಪದ ಶಾಸಕ ವಜ್ಜಲ್ ಅವರು, 2017ರಿಂದ ಟೆಂಡರ್ ನೆಪದಲ್ಲಿ ದಿನ ಕಳೆಯಲಾಗುತ್ತಿದೆ. ಸ್ಪಷ್ಟವಾದ ಉತ್ತರ ಕೊಡಬೇಕೆಂದು ಪಟ್ಟು ಹಿಡಿದಾಗ, ಈ ಕುರಿತು ಸಿಎಂ ಜತೆ ಚರ್ಚಿಸಿ ಕುಡಿವ ನೀರು ಒದಗಿಸಲು ಪ್ರಯತ್ನ ಮಾಡುವುದಾಗಿ ಸಚಿವರು ಭರವಸೆ ನೀಡಿದರು.