ಮಸ್ಕಿ: ಸಣ್ಣ ಸಣ್ಣ ಸಮುದಾಯಗಳು ಪ್ರಗತಿ ಕಾಣಬೇಕಾದರೆ ಆ ಸಮಾಜದ ಯುವಕ-ಯುವತಿಯರು ಶಿಕ್ಷಣವಂತರಾಗಿ, ಸಂಸ್ಕಾರಯುತರಾಗ ಬೇಕು ಎಂದು ಶಾಸಕ ಬಸನಗೌಡ ತುರ್ವಿಹಾಳ ಹೇಳಿದರು.
ಪಟ್ಟಣದ ಭ್ರಮರಾಂಬ ದೇವಸ್ಥಾನ ದಲ್ಲಿ ಭಾನುವಾರ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗಂಗಾಮತಸ್ಥ ಸಮಾಜವು ಸಂಸ್ಕಾರವಂತ ಸಮಾಜವಾಗಿದೆ. 12ನೇ ಶತಮಾನದಲ್ಲಿ ದಿಟ್ಟ ಶರಣರಾಗಿದ್ದ ಅಂಬಿಗರ ಚೌಡಯ್ಯ ಅವರು ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದು ಸ್ಮರಿಸಿದರು.
ಗಚ್ಚಿನ ಹಿರೇಮಠದ ವರರುದ್ರಮುನಿ ಶಿವಾಚಾರ್ಯರು, ಮಲ್ಲಿಕಾರ್ಜುನ ದೇವರು ಹಾಗೂ ಗಣ್ಯರಾದ ಮಹಾದೇವಪ್ಪಗೌಡ ಪೊಲೀಸ್ ಪಾಟೀಲ್, ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ರಾಜನಾಯ್ಕ, ನಾಗಭೂಷಣ ಬಾರಕೇರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಚೌಡಯ್ಯನವರ 906ನೇ ಜಯಂತ್ಯುತ್ಸವ ಹಾಗೂ ಗಂಗಾಮಾತೆಯ ಸ್ಮರಣೋತ್ಸವದ ನಿಮಿತ್ತ ಗಂಗಾಮತಸ್ಥ ಸಮಾಜದಿಂದ ಪ್ರಮುಖ ಬೀದಿಗಳಲ್ಲಿ ಗಂಗಾ ಪರಮೇಶ್ವರಿ ಹಾಗೂ ಶರಣರ ಭಾವಚಿತ್ರಗಳ ಮೆರವಣಿಗೆ ನಡೆಯಿತು.
ವಾದ್ಯಮೇಳದೊಂದಿಗೆ ಸಾಗಿದ ಮೆರವಣಿಗೆಯಲ್ಲಿ ಮಹಿಳೆ ಯರು ಕಳಸ-ಪೂರ್ಣಕುಂಭ ಹೊತ್ತು ಭಾಗವಹಿಸಿದ್ದರು. ತೇರುಬಜಾರ, ದೈವದಕಟ್ಟೆ, ಮೇನಬಜಾರ, ಖಲೀಲ ವೃತ್ತ, ಅಗಸಿ, ಅಶೋಕ ವೃತ್ತ ಹಾಗೂ ಹಳೆಯ ಬಸ್ ನಿಲ್ದಾಣದ ಮಾರ್ಗವಾಗಿ ಸಂಚರಿಸಿದ ಮೆರವಣಿಗೆಯು ಕೊನೆಗೆ ಭ್ರಮರಾಂಬ ದೇವಸ್ಥಾನ ತಲುಪಿತು.