

ರಾಯಚೂರು. ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಜಿಲ್ಲಾ ಪೊಲೀಸ್ ಕವಾಯತ್ತು ಮೈದಾನದಲ್ಲಿ ಶುಕ್ರವಾರ ಸಂಜೆ
2025ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದ ಡಿವೈಎಸ್ಪಿ ಶಾಂತವೀರ ಈ. ದಂಪತಿಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ ಮಾತನಾಡಿ,
ಮುಖ್ಯಮಂತ್ರಿಗಳ ಪದಕವು ಪೊಲೀಸ್ ಇಲಾಖೆಯಲ್ಲಿ ರಾಜ್ಯ ಮಟ್ಟದ ಅತ್ಯಂತ ಗೌರವಾನ್ವಿತ ಪ್ರಶಸ್ತಿಯಾಗಿದೆ. ಜಿಲ್ಲೆಯ ಇಬ್ಬರು ಡಿವೈಎಸ್ಪಿಗಳಿಗೆ ದೊರೆತಿರುವುದು ಶ್ಲಾಘನೀಯವಾಗಿದೆ. ಪೊಲೀಸ್ ಸೇರಿದಂತೆ ವಿವಿಧ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ತಮ್ಮ ಕೆಲಸದಲ್ಲಿ ಒಂದಲ್ಲ ಒಂದು ರೀತಿಯ ಸೃಜನಶೀಲತೆಯನ್ನು ಹೊಂದುವುದರ ಜತೆಗೆ ಶ್ರಮ ವಹಿಸಿರುತ್ತಾರೆ. ಪ್ರತಿಯೊಬ್ಬರಿಗೂ ಅವರ ಕೆಲಸಕ್ಕೆ ತಕ್ಕಂತೆ ಮುಂದಿನ ದಿನಗಳಲ್ಲಿ ಗೌರವ ಮತ್ತು ಮಾನ್ಯತೆ ಸಿಗಲಿದೆ ದೊರೆಯಲಿ ಎಂದರು.
ಎಸ್ಪಿ ಅರುಣಾಂಗ್ಷು ಗಿರಿ ಮಾತನಾಡಿ, ಈ ಬಾರಿ ನಮ್ಮ ಜಿಲ್ಲೆಯ ಇಬ್ಬರು ಡಿವೈಎಸ್ಪಿಗಳಾದ ಶಾಂತವೀರ ಹಾಗೂ ವೆಂಕಟೇಶ್ ಅವರಿಗೆ ಮುಖ್ಯಮಂತ್ರಿ ಚಿನ್ನದ ಪದಕ ದೊರೆತಿದೆ. ಇದೇ ರೀತಿ ಎಲ್ಲಾ ಸಿಬ್ಬಂದಿಗಳಿಗೆ ದೊರೆಯಲಿದೆ ಎನ್ನುವ ವಿಶ್ವಾಸ ನನಗೆ ಇದೆ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ನಮ್ಮ ಸಿಬ್ಬಂದಿಗಳು ನಿರಂತರವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಕೆಲವರಲ್ಲಿ ಆ ಶಿಸ್ತು ಹೆಚ್ಚಳವಾಗಿ ಕಂಡು ಬರುತ್ತಿದೆ. ಅದನ್ನು ನಾವು ತಡೆಯಬೇಕು. ಪೊಲೀಸ್ ಎಂದರೆ ಶಿಸ್ತು ಎಂದು ಎಲ್ಲರಿಗೆ ಮನವರಿಕೆಯಾಗಬೇಕು ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಸುರೇಶ ವರ್ಮಾ, ಎಎಸ್ಪಿಗಳಾದ ಹರೀಶ್, ಕುಮಾರ ಸ್ವಾಮಿ ಮತ್ತು ಡಿವೈಎಸ್ಪಿ ಶಾಂತವೀರ ಈ. ,ಶ್ರೀವಾಣಿ ಇದ್ದರು.