ಮಾನ್ವಿ: ತಾಲೂಕಿನ ದೇವಿಪುರದ ಗ್ರಾಮ ದೇವರಾದ ದ್ಯಾವಮ್ಮದೇವಿ ಹಾಗೂ ಚೌಡಮ್ಮದೇವಿ ಜಾತ್ರೆ ಅಂಗವಾಗಿ ಬುಧವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ, ಸಿಡಿಬಂಡಿ ಉತ್ಸವ ಅದ್ದೂರಿಯಾಗಿ ಜರುಗಿತು.
ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿಟ್ಟು ಹತ್ತಿರದ ತುಂಗಭದ್ರಾ ನದಿಯಲ್ಲಿ ಗಂಗೆ ಪೂಜೆ ಸಲ್ಲಿಸಿ ನಂತರ ಸುಮಂಗಲೆಯರು ಕುಂಭಗಳನ್ನು ಹೊತ್ತು, ವಾದ್ಯ ಮೇಳದೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಬಳಿಕ ದೇವಸ್ಥಾನ ತಲುಪಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಿಯರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಮುತ್ತೈದೆಯರು ಹಸಿರು ಬಳೆ, ಸೀರೆ ಮತ್ತು ಕುಂಕುಮ ಅರ್ಪಿಸುವ ಮೂಲಕ ಹರಕೆ ತೀರಿಸಿದರು.