ಆನ್‌ಲೈನ್ ಔಷಧಿ ಮಾರಾಟ ರದ್ದತಿ ವಿರೋಧಿಸಿಬುಧವಾರ ರಾಯಚೂರಿನ ಪೇಟ್ಲಾಬುರ್ಜ್‌ದಲ್ಲಿ ಜಿಲ್ಲಾ ಕೆಮಿಸ್ಟ್ ಮತ್ತು ಡ್ರಗಿಸ್ಟ್ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ಮುರುಳಿಧರ, ಪ್ರಮುಖರಾದ ಪಿ.ವೆಂಕಟೇಶ, ಗೌತಮ್ ಗಿಯಾ,ಆರ್.ಜಯರಾಮ,ವೈ.ಸುರೇಂದ್ರ, ಬಸವರಾಜ ಗೌಡ, ವಿ,ಎನ್.ಪಾಟೀಲ್, ಕಾಶಿನಾಥ, ಚಂದ್ರಶೇಖರಯ್ಯ, ಏವಂತ, ಕೆ.ವಿಶ್ವನಾಥ, ರಾಜೇಶ ಜುನಾರ ಜೈನ್,ವೆಂಕಟೇಶ್ವರ, ವಿನೋದ ಕುಮಾರ ಇದ್ದರು.
ಆನ್‌ಲೈನ್ ಔಷಧಿ ಮಾರಾಟ ರದ್ದತಿ, ಕಾರ್ಪೊರೇಟ್ ಸಂಸ್ಥೆಗಳು ಔಷಧಿಗಳ ಮೇಲೆ ಮಿತಿ ಮೀರಿ ರಿಯಾಯತಿ ನೀಡುತ್ತಿದ್ದು, ಇದರಿಂದ ಸ್ಥಳೀಯ ಔಷಧಿ ಅಂಗಡಿಗಳಿಗೆ ಸುಸ್ಥಿರತೆ ಇಲ್ಲದಂತಾಗಿದ್ದು, ಇದನ್ನೂ ತಡೆಗಟ್ಟಬೇಕೆಂದು ಒತ್ತಾಯಿಸಿ ಬುಧವಾರ ನಗರದ ಪೇಟ್ಲಾಬುರ್ಜ್‌ದಲ್ಲಿ ಜಿಲ್ಲಾ ಕೆಮಿಸ್ಟ್ ಮತ್ತು ಡ್ರಗಿಸ್ಟ್ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಬೆಳಗ್ಗೆಯಿಂದಲೇ ಔಷಧಿ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ನಗರದ ಪ್ರಮುಖರ ರಸ್ತೆ ಹಾಗೂ ಬೀದಿಗಳಲ್ಲಿ ಪ್ರತಿಭಟನೆ ನಡೆಸಿ, ಆನ್‌ಲೈನ್‌ನಲ್ಲಿ ಔಷಧಿ ಮಾರಾಟವಾಗುವುದರಿಂದ ಬಂಡವಾಳ ಹಾಕಿ ಔಷಧಿ ಅಂಗಡಿಗಳನ್ನು ಮಾಡಿಕೊಂಡವರಿಗೆ ಆರ್ಥಿಕ ಸಂಕಷ್ಟ ಉಂಟಾಗುತ್ತದೆ. ಕೂಡಲೇ ಆನ್‌ನಲ್ಲಿ ಔಷಧಿ ಮಾರಾಟ ಮಾಡುವುದನ್ನು ರದ್ದುಪಡಿಸಬೇಕು ಎಂದು ಹೇಳಿದರು.
ಆನ್‌ಲೈನ್‌ನಲ್ಲಿ ಹ್ಯಾಬಿಟ್ ಫಾರ್ಮಿಂಗ್ ಔಷಧಿಗಳು ಸುಲಭವಾಗಿ ಸಿಗುವುದರಿಂದ ನಿಯಮವೂ ಉಲ್ಲಂಘನೆಯಾಗುತ್ತಿದೆ. ಆನ್‌ಲೈನ್‌ನಲ್ಲಿ ಔಷಧಿ ಮಾರಾಟ ಮಾಡುವ ಕಾರ್ಪೊರೇಟ್ ಕಂಪನಿಗಳು ಇಡೀ ದೇಶದಲ್ಲಿ ವ್ಯಾಪಾರ ಮಾಡುವುದರಿಂದ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಔಷಧಿಯನ್ನು ಕೊಳ್ಳುವುದರಿಂದ ಅವರಿಗೆ ಅತಿಯಾದ ರಿಯಾಯತಿ ಸಿಗುತ್ತದೆ. ಆದ್ದರಿಂದ ಅವರು ಗ್ರಾಹಕರಿಗೆ ರಿಯಾಯತಿ ದರದಲ್ಲಿ ಮಾರಾಟ ಮಾಡುತ್ತಾರೆ. ಆದರೆ ಅಂತಹ ಸ್ಪರ್ಧೆಗೆ ಸ್ಥಳೀಯ ಔಷಧಿ ಅಂಗಡಿಗಳು ಇರಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು. ಯಾವುದೇ ಡ್ರಗ್ ಔಷಧಿ ನೀಡಬೇಕಾದರೆ ಅದರದ್ದೇ ಆದ ನಿಯಮಗಳಿದ್ದು, ಆದರೆ ಆನ್‌ಲೈನ್‌ನಲ್ಲಿ ನಿಯಮಿತವಾಗಿ ಬಳಸುವ ಮತ್ತು ಹ್ಯಾಬಿಟ್ ಫಾರ್ಮಿಂಗ್ ಡ್ರಗ್‌ಗಳೂ ಕೂಡ ಸುಲಭವಾಗಿ ಸಿಗುವುದರಿಂದ ಔಷಧಿ ವ್ಯಾಪಾರದ ನಿಯಮಗಳನ್ನೂ ಉಲ್ಲಂಘಿಸಿದಂತಾಗುತ್ತದೆ ಕೂಡಲೇ ಅದನ್ನೂ ತಡೆಗಟ್ಟಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಮುರುಳಿಧರ, ಪ್ರಮುಖರಾದ ಪಿ.ವೆಂಕಟೇಶ, ಗೌತಮ್ ಗಿಯಾ,ಆರ್.ಜಯರಾಮ,ವೈ.ಸುರೇಂದ್ರ, ಬಸವರಾಜ ಗೌಡ, ವಿ,ಎನ್.ಪಾಟೀಲ್, ಕಾಶಿನಾಥ, ಚಂದ್ರಶೇಖರಯ್ಯ, ಏವಂತ, ಕೆ.ವಿಶ್ವನಾಥ, ರಾಜೇಶ ಜುನಾರ ಜೈನ್,ವೆಂಕಟೇಶ್ವರ, ವಿನೋದ ಕುಮಾರ ಸೇರಿ ಅನೇಕರು ಇದ್ದರು.
((ಬಾಕ್ಸ್)) ದೇಶದಲ್ಲಿ ಇ-ಫಾರ್ಮಸಿ ಹಾಗೂ ಆನ್‌ಲೈನ್ ಮೂಲಕ ಔಷಧ ಮಾರಾಟವನ್ನು ನಿಲ್ಲಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ ಕರೆ ನೀಡಿದ ರಾಷ್ಟ್ರವ್ಯಾಪಿ ಬಂದ್‌ಗೆ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಜಿಲ್ಲೆಯ ಬಹುತೇಕ ಮೆಡಿಕಲ್ ಅಂಗಡಿಗಳು ಇಂದು ಸಂಪೂರ್ಣ ಬಂದ್ ಆಗಿದ್ದವು. ಜಿಲ್ಲೆಯಲ್ಲಿರುವ ಸುಮಾರು 1750 ಕ್ಕೂ ಅಧಿಕ ಮೆಡಿಕಲ್ ಶಾಪ್‌ಗಳು ಬೆಳಗ್ಗೆಯಿಂದಲೇ ನಗರದ ಪ್ರಮುಖ ರಸ್ತೆಗಳಲ್ಲಿ ಇರುವ ಔಷಧ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಇದರಿಂದಾಗಿ ಸಾರ್ವಜನಿಕರು ಹಾಗೂ ರೋಗಿಗಳು ತೀವ್ರ ತೊಂದರೆ ಅನುಭವಿಸಿದರು. ದಿನನಿತ್ಯ ಔಷಧ ಸೇವನೆ ಮಾಡುವ ಹೃದಯ ರೋಗ, ಮಧುಮೇಹ, ರಕ್ತದೊತ್ತಡ ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರು ಔಷಧ ಸಿಗದೆ ಪರದಾಡಿದ್ದು ಕಂಡುಬಂತು. ಜಿಲ್ಲಾಸ್ಪತ್ರೆ, ಖಾಸಗಿ ಆಸ್ಪತ್ರೆಗಳು ಹಾಗೂ ಕ್ಲಿನಿಕ್‌ಳಿಗೆ ಬಂದ ಹಲವರು ವೈದ್ಯರ ಚೀಟಿ ಹಿಡಿದು ಮೆಡಿಕಲ್ ಅಂಗಡಿಗಳ ಬಳಿ ಅಲೆದಾಡಿದರು. ಗ್ರಾಮೀಣ ಭಾಗಗಳಿಂದ ಬಂದ ರೋಗಿಗಳು ಇನ್ನಷ್ಟು ಸಂಕಷ್ಟ ಅನುಭವಿಸುವಂತಾಯಿತು. ಅನಾರೋಗ್ಯದ ಸಂದರ್ಭದಲ್ಲಿ ಔಷಧ ಸಿಗದಿದ್ದರೆ ಜನರು ಏನು ಮಾಡಬೇಕು, ಸರ್ಕಾರ ಹಾಗೂ ಸಂಘಟನೆಗಳು ಜನರ ಆರೋಗ್ಯದ ಬಗ್ಗೆ ಯೋಚಿಸಬೇಕು ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದರು.