ವೈದ್ಯಕೀಯ ವಿದ್ಯಾರ್ಥಿಗಳಿಗೆ ಡ್ರಗ್ಸ್ ಬಳಕೆ ಜಾಗೃತಿ ಕಾರ್ಯಕ್ರಮ ವಿದ್ಯಾರ್ಥಿಗಳು ವ್ಯಸನಗಳಿಂದ ದೂರವಿರಿ

ರಾಯಚೂರಿನ ರಿಮ್ಸ್ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ  ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಯಿಂದ ಮಾದಕ ವಸ್ತುಗಳ ಹಾಗೂ ಡ್ರಗ್ಸ್ ಬಳಕೆ ಹಾಗೂ ದುಷ್ಪರಿಣಾಮದ ಕುರಿತು ಜಾಗೃತಿ ಕಾರ್ಯಕ್ರಮವನ್ನು  ಜಿಲ್ಲಾಧಿಕಾರಿ ನಿತೀಶ್ ಕೆ., ಉದ್ಘಾಟಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ, ಹೆಚ್ಚುವರಿ ಪೊಲೀಸ್ ಅಧೀಕ್ಷರಾದ ಕುಮಾರಸ್ವಾಮಿ, ಜಿ.ಹರೀಶ, ರಿಮ್ಸ್ ನಿರ್ದೇಶಕ ಡಾ.ರಮೇಶ, ಪ್ರಮುಖರಾದ ರಮೇಶಬಾಬು, ಉದಯ್, ಡಾ.ವಿಜಯಶಂಕರ, ಡಾ.ಬಸವರಾಜ ಎಂ.ಪಾಟೀಲ್ ಇದ್ದರು.
ರಾಯಚೂರಿನ ರಿಮ್ಸ್ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಯಿಂದ ಮಾದಕ ವಸ್ತುಗಳ ಹಾಗೂ ಡ್ರಗ್ಸ್ ಬಳಕೆ ಹಾಗೂ ದುಷ್ಪರಿಣಾಮದ ಕುರಿತು ಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ನಿತೀಶ್ ಕೆ., ಉದ್ಘಾಟಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ, ಹೆಚ್ಚುವರಿ ಪೊಲೀಸ್ ಅಧೀಕ್ಷರಾದ ಕುಮಾರಸ್ವಾಮಿ, ಜಿ.ಹರೀಶ, ರಿಮ್ಸ್ ನಿರ್ದೇಶಕ ಡಾ.ರಮೇಶ, ಪ್ರಮುಖರಾದ ರಮೇಶಬಾಬು, ಉದಯ್, ಡಾ.ವಿಜಯಶಂಕರ, ಡಾ.ಬಸವರಾಜ ಎಂ.ಪಾಟೀಲ್ ಇದ್ದರು.
Published on
ರಾಯಚೂರು ವೈದ್ಯಕೀಯ ವಿದ್ಯಾರ್ಥಿಗಳು ನಿರಂತರ ಪರೀಕ್ಷೆಗಳು, ದೀರ್ಘಾವಧಿಯ ಆಸ್ಪತ್ರೆ ಕರ್ತವ್ಯಗಳು ಹಾಗೂ ಮಾನಸಿಕ ಒತ್ತಡದಿಂದಾಗಿ ಸುಲಭವಾಗಿ ವ್ಯಸನದ ಬಲೆಗೆ ಸಿಲುಕುವ ಸಾಧ್ಯತೆ ಹೆಚ್ಚಿದೆಂದು ಜಿಲ್ಲಾಧಿಕಾರಿ ನಿತೀಶ್ ಕೆ., ಹೇಳಿದರು.
ನಗರದ ರಿಮ್ಸ್ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ,ರಿಮ್ಸ್ ವೈದ್ಯಕೀಯ ಕಾಲೇಜಿನಿಂದ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ಹಾಗೂ ಡ್ರಗ್ಸ್ ಬಳಕೆ ಹಾಗೂ ದುಷ್ಪರಿಣಾಮದ ಕುರಿತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಮಾದಕ ವ್ಯಸನ ಹೆಚ್ಚುತ್ತಿರುವುದಕ್ಕೆ ನಿರಂತರ ಒತ್ತಡ ಹಾಗೂ ಔಷಧಿಗಳ ಸುಲಭ ಪ್ರವೇಶವೇ ಪ್ರಮುಖ ಕಾರಣವಾಗಿದ್ದು, ಒಮ್ಮೆ ಮಾತ್ರ ಎಂಬ ನಿರ್ಧಾರವೇ ದೊಡ್ಡ ಅಪಾಯಕ್ಕೆ ದಾರಿ ಮಾಡಿಕೊಡುತ್ತದೆ.
ಒಂದು ಬಾರಿ ಮಾತ್ರ ಎಂಬ ನಿರ್ಧಾರವೇ ಅಪಾಯದ ಆರಂಭವಾಗಿದ್ದು, ಹೆಚ್ಚಿನ ಸಂದರ್ಭಗಳಲ್ಲಿ ವ್ಯಸನವು ಒಮ್ಮೆ ಮಾತ್ರ ಎಂಬ ಚಿಕ್ಕ ನಿರ್ಧಾರದಿಂದ ಆರಂಭವಾಗುತ್ತದೆ. ಆರಂಭದಲ್ಲಿ ವಿಶ್ರಾಂತಿಗಾಗಿ ತೆಗೆದುಕೊಳ್ಳುವ ಪದಾರ್ಥಗಳು ನಿಧಾನವಾಗಿ ಅವಲಂಬನೆಗೆ ದಾರಿ ಮಾಡಿ ಕೊಡುತ್ತವೆ ಎಂದು ಎಚ್ಚರಿಸಿದರು.
ಜ್ಞಾನ ಇದ್ದರೂ ಅಪಾಯ ತಪ್ಪುವುದಿಲ್ಲ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಔಷಧಿಗಳ ಬಗ್ಗೆ ತಿಳುವಳಿಕೆ ಇದ್ದರೂ, ಅದರಿಂದ ವ್ಯಸನದಿಂದ ರಕ್ಷಣೆ ಸಿಗುವುದಿಲ್ಲ. ನನಗೆ ಗೊತ್ತಿದೆ, ನಾನು ನಿಯಂತ್ರಿಸಬಹುದು ಎಂಬ ಭಾವನೆವೇ ಅಪಾಯಕ್ಕೆ ಕಾರಣವಾಗುತ್ತದೆ ಎಂದರು.
ತಮ್ಮ ನಡೆ, ನುಡಿಗಳನ್ನು ಸ್ವತಃ ಪರಿಶೀಲಿಸಿಕೊಳ್ಳಬೇಕು. ಸಮಸ್ಯೆಯನ್ನು ಮರೆಮಾಚದೇ ಸ್ನೇಹಿತರು ಅಥವಾ ಶಿಕ್ಷಕರೊಂದಿಗೆ ಹಂಚಿಕೊಳ್ಳಬೇಕು. ವೈದ್ಯಕೀಯ ಹೊರತಾಗಿ ಹವ್ಯಾಸಗಳು, ಕ್ರೀಡೆಗಳಿಗೆ ಸಮಯ ಮೀಸಲಿಡಬೇಕು. ಸಹಪಾಠಿಗಳಲ್ಲಿ ಬದಲಾವಣೆ ಕಂಡರೆ ಗಮನಿಸಿ ಸಹಾಯ ಮಾಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ ಮಾತನಾಡಿ, ಡ್ರಗ್ಸ್ ನಿಯಂತ್ರಣಕ್ಕೆ ಸರಬರಾಜು ತಡೆಯುವುದು ಅತ್ಯಂತ ಮುಖ್ಯವಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲೇ ಡ್ರಗ್ಸ್ ಬಳಕೆ ಹಾಗೂ ಸರಬರಾಜು ಚೈನ್ ಹೆಚ್ಚುತ್ತಿರುವುದು ಗಂಭೀರ ವಿಷಯವಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವೈದ್ಯರು ಮೂರು ರೀತಿಯಲ್ಲಿ ಡ್ರಗ್ಸ್ ಸಮಸ್ಯೆಯಲ್ಲಿ ಸಿಲುಕುತ್ತಿರುವುದು ಅತ್ಯಂತ ಅಪಾಯಕಾರಿ ಸಂಗತಿಯಾಗಿದೆ. ಎಂಬಿಬಿಎಸ್ ಸೇರಿದಂತೆ ದೀರ್ಘಾವಧಿಯ ವೈದ್ಯಕೀಯ ಶಿಕ್ಷಣದಲ್ಲಿ ಮಾನಸಿಕ ಮತ್ತು ದೈಹಿಕ ಒತ್ತಡ ಹೆಚ್ಚಿದ್ದು, ಅದನ್ನು ತಗ್ಗಿಸಿಕೊಳ್ಳಲು ಕೆಲವರು ಡ್ರಗ್ಸ್ ಬಳಕೆ ಮಾಡುತ್ತಿರುವುದು ಕಂಡು ಬರುತ್ತಿದೆ. ಇದು ಶಿಕ್ಷಣ ಕ್ಷೇತ್ರದಲ್ಲೇ ದುರುಪಯೋಗಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದರು.
ಮಂಗಳೂರು ಸೇರಿದಂತೆ ಕೆಲವು ವೈದ್ಯಕೀಯ ಕೇಂದ್ರಗಳಲ್ಲಿ ನಡೆದ ದಾಳಿಗಳ ವೇಳೆ ವಿದ್ಯಾರ್ಥಿಗಳು, ರೆಸಿಡೆಂಟ್ ವೈದ್ಯರು ಸೇರಿದಂತೆ ಹಲವರು ಡ್ರಗ್ಸ್ ಪ್ರಕರಣಗಳಲ್ಲಿ ಸಿಲುಕಿದ್ದು, 21 ವೈದ್ಯರ ಮೆಡಿಕಲ್ ಲೈಸೆನ್ಸ್ ಅಮಾನತುಗೊಂಡ ಘಟನೆ ಉದಾಹರಣೆಯಾಗಿದೆ ಎಂದು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಅಂಬ್ಯುಲೆನ್ಸ್ ಹಾಗೂ ವೈದ್ಯರ ವಾಹನಗಳನ್ನು ಬಳಸಿಕೊಂಡು ಡ್ರಗ್ಸ್ ಸಾಗಣೆ ನಡೆದಿರುವ ಪ್ರಕರಣಗಳೂ ಬೆಳಕಿಗೆ ಬಂದಿವೆ. ವೈದ್ಯರನ್ನು ಯಾರೂ ಅನುಮಾನಿಸುವುದಿಲ್ಲ ಎಂಬ ನಂಬಿಕೆಯನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಗಾಂಜಾ ಬಳಕೆ ಪ್ರಮುಖವಾಗಿದ್ದು, ಈ ವರ್ಷ ಈಗಾಗಲೇ 93 ಪ್ರಕರಣಗಳು ದಾಖಲಾಗಿವೆ. ವಿಶೇಷವಾಗಿ ಆಂಧ್ರ ಪ್ರದೇಶದಿಂದ ಸೇಂದಿ ಎಂಬ ಮಾದಕ ವಸ್ತು ಸಾಗಾಣಿಕೆ ಆಗುತ್ತಿರುವುದು ಪತ್ತೆಯಾಗಿದೆ. ವೈದ್ಯಕೀಯ ವೃತ್ತಿ ಸೇವೆಯ ಮಾರ್ಗವಾಗಿದ್ದು, ಡ್ರಗ್ಸ್ ವ್ಯಸನದಿಂದ ಅದನ್ನು ಹಾಳು ಮಾಡಿಕೊಳ್ಳಬಾರದು. ವೈದ್ಯರು ಸಮಾಜ ಸೇವೆಗೆ ಬಂದವರು. ಈ ಮಾರ್ಗದಿಂದ ತಪ್ಪಬೇಡಿ ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಡಿವೈಎಸ್ಪಿ ಶಾಂತವೀರ ಮಾತನಾಡಿ, ಮಾದಕ ವ್ಯಸನವು ವಿದ್ಯಾರ್ಥಿಗಳ ಗಮನಶಕ್ತಿ, ಕುಟುಂಬ, ಸ್ನೇಹಿತರ ವಿಶ್ವಾಸ ಹಾಗೂ ವೃತ್ತಿಪರ ಪ್ರತಿಷ್ಠೆಗೆ ಹಾನಿ ಉಂಟುಮಾಡುತ್ತದೆ. ಇದರಿಂದ ಅವರ ವೈದ್ಯಕೀಯ ಸೇವೆಯ ಗುರಿಯೇ ಹಾಳಾಗುವ ಸಾಧ್ಯತೆ ಇದೆ. ಅದಕ್ಕಾಗಿ ವಿದ್ಯಾರ್ಥಿಗಳು ವ್ಯಸನದಿಂದ ದೂರ ಇರಲು ಕೆಲವು ಮುಖ್ಯ ಅಂಶಗಳ ಬಗ್ಗೆ ನಿಗಾ ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷರಾದ ಕುಮಾರಸ್ವಾಮಿ, ಜಿ.ಹರೀಶ, ರಿಮ್ಸ್ ನಿರ್ದೇಶಕ ಡಾ.ರಮೇಶ, ಪ್ರಮುಖರಾದ ರಮೇಶಬಾಬು, ಉದಯ್, ಡಾ.ವಿಜಯಶಂಕರ, ಡಾ.ಬಸವರಾಜ ಎಂ.ಪಾಟೀಲ್ ಸೇರಿದಂತೆ ಅನೇಕರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net