ಸರ್ಕಾರಿ ಬಸ್ ಪಲ್ಟಿಯಾಗಿ ನಿರ್ವಾಹಕ ಸಾವು

ದೇವದುರ್ಗ ತಾಲೂಕು ಅಂಚೆಸೂಗೂರಿನಲ್ಲಿ ಜಮೀನಿಗೆ ಉರುಳಿಬಿದ್ದ ಬಸ್. ನಿರ್ವಾಹಕ ಬಸವರಾಜ .
ದೇವದುರ್ಗ ತಾಲೂಕು ಅಂಚೆಸೂಗೂರಿನಲ್ಲಿ ಜಮೀನಿಗೆ ಉರುಳಿಬಿದ್ದ ಬಸ್. ನಿರ್ವಾಹಕ ಬಸವರಾಜ .
Published on

18 ವಿದ್ಯಾರ್ಥಿಗಳು, 5-6 ಪ್ರಯಾಣಕರಿಗೆ ಸಣ್ಣಪುಟ್ಟ ಗಾಯ

ದೇವದುರ್ಗ: ತಾಲೂಕಿನ ಅಂಚೆಸೂಗೂರು ಗ್ರಾಮದಲ್ಲಿ ಮಂಗಳವಾರ ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಬಸ್ ಪಲ್ಟಿಯಾಗಿ, ನಿರ್ವಾಹಕ ಬಸವರಾಜ ನೀರಲಕೇರಿ (35) ಮೃತಪಟ್ಟರೆ ಚಾಲಕ ಸೇರಿ 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಬೆಳಗ್ಗೆ ಅಂಚೆಸೂಗೂರುಗೆ ಹೋಗಿದ್ದ ಬಸ್, ಪ್ರಯಾಣಿಕರು, ವಿದ್ಯಾರ್ಥಿಗಳನ್ನು ತುಂಬಿಕೊಂಡು ವಾಪಸ್ ಬರುವ ವೇಳೆ ಪಟ್ಟಿ ಕಟ್ ಆಗಿದ್ದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ನಿರ್ವಾಹಕ ಲಿಂಗಸುಗೂರು ತಾಲೂಕಿನವರಾದ ಬಸವರಾಜ ನೀರಲಕೇರಿ, ಚಾಲಕ ಶರಣಬಸವ ಅವರನ್ನು ರಿಮ್ಸ್‌ಗೆ ದಾಖಲಿಸಲಾಗಿತ್ತು. ಆದರೆ, ನಿರ್ವಾಹಕ ಮೃತಪಟ್ಟಿದ್ದಾರೆ. 18 ವಿದ್ಯಾರ್ಥಿಗಳು, 5-6 ಪ್ರಯಾಣಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಬಸ್‌ನಲ್ಲಿ ಅಂಚೆಸೂಗೂರು, ಅಂಜಳ ಗ್ರಾಮದಿಂದ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು 20ಕ್ಕೂ ಹೆಚ್ಚು ಪ್ರಯಾಣಿಕರನ್ನು ಕರೆದುಕೊಂಡು ಬರುವ ವೇಳೆ ಅವಘಡ ನಡೆದಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಗ್ರಾಮಸ್ಥರು ಸಹಾಯ: ಬಸ್ ಉರುಳಿಬಿದ್ದ ತಕ್ಷಣ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರು, ಜನರು ಸ್ಥಳಕ್ಕೆ ದೌಡಾಯಿಸಿ ಪ್ರಯಾಣಿಕರಿಗೆ ಪ್ರಥಮ ಚಿಕಿತ್ಸೆ ನೀಡಿ ಸಹಾಯ ಮಾಡಿದರು. ಆಂಬುಲೆನ್ಸ್ ಬರುವವರೆಗೆ ಕಾಯದೆ, ಬೈಕ್, ಆಟೋಗಳಲ್ಲಿ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಅಲ್ಲದೆ ಬಸ್‌ನಲ್ಲಿ ಸಿಲುಕಿದವರನ್ನು ಹೊರತರುವಲ್ಲಿ ಪ್ರಮುಖ ಪಾತ್ರವಹಿಸಿದರು.
ಗಾಯಗೊಂಡ ವಿದ್ಯಾರ್ಥಿಗಳಿಗೆ ದೇವದುರ್ಗ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net