ಹಟ್ಟಿಚಿನ್ನದಗಣಿ:ಪಟ್ಟಣದ ಜಲಧಾರೆ ಕುಡಿವ ನೀರಿನ ಯೋಜನೆಯ ಪೈಪ್‌ಲೈನ್ ಅನ್ನು ಹಳ್ಳದ ಕೊಳಚೆ ನೀರು ಹರಿಯುವ ಪ್ರದೇಶದಲ್ಲಿ ಅಳವಡಿಸಿರುವುದಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಶೀಲನೆಗಾಗಿ ಆಗಮಿಸಿದ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಭರತ್ ಕುಮಾರ್ ಅವರ ವಾಹನಕ್ಕೆ ಮುತ್ತಿಗೆ ಹಾಕಿದ ಘಟನೆ ಸೋಮವಾರ ನಡೆದಿದೆ.
ಕೊಳಚೆ ನೀರಿನ ನಡುವೆ ಪೈಪ್‌ಲೈನ್ ಹಾಕಿರುವುದು ಸಾರ್ವಜನಿಕ ಆರೋಗ್ಯಕ್ಕೆ ಅಪಾಯಕಾರಿ ಎಂದು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಸ್ಥಳದಲ್ಲೇ ತಾಂತ್ರಿಕ ದೋಷವನ್ನು ಒಪ್ಪಿಕೊಂಡ ಅಧಿಕಾರಿಗಳು, ಹಳ್ಳದ ಮಧ್ಯಭಾಗದಲ್ಲಿ ಕಾಂಕ್ರೀಟ್ ಪಿಲ್ಲರ್‌ಗಳನ್ನು ನಿರ್ಮಿಸಿ, ಅವುಗಳ ಮೇಲ್ಭಾಗದಲ್ಲಿ ಸುರಕ್ಷಿತವಾಗಿ ಪೈಪ್‌ಲೈನ್ ಹಾದುಹೋಗುವಂತೆ ಕಾಮಗಾರಿಯನ್ನು ತಿದ್ದುಪಡಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇದೇ ವೇಳೆ ಕಾಮಗಾರಿಗಾಗಿ ಮುಖ್ಯರಸ್ತೆ ಅಗೆದು ಹಾಗೆಯೇ ಬಿಟ್ಟಿರುವುದರಿಂದ ಗುಂಡಿಗಳು ನಿರ್ಮಾಣವಾಗಿ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದರು. ಮಳೆಗೆ ನೀರು ನಿಂತು ಅಪಘಾತ ಸಂಭವಿಸುವ ಆತಂಕವನ್ನು ವ್ಯಕ್ತಪಡಿಸಿದರು. ರಸ್ತೆ ಮರುಸ್ಥಾಪನೆ ಕುರಿತು ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಯೋಜನಾ ಕಾಮಗಾರಿಗಳನ್ನು ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳೊಂದಿಗೆ ತ್ವರಿತವಾಗಿ ಪೂರ್ಣಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದರು.