ದೇವದುರ್ಗದಲ್ಲಿ ಗ್ರೇಡ್-2 ತಹಸೀಲ್ದಾರ್ ಪರಶುರಾಮಗೆ ರಾಜ್ಯ ರೈತ ಸಂಘದಿಂದ ಮನವಿ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಇಂಗಳದಾಳ, ಜಿಲ್ಲಾ ಉಪಾಧ್ಯಕ್ಷ ಹನುಮಗೌಡ ನಾಯಕ, ತಾಲೂಕು ಅಧ್ಯಕ್ಷ ಹಾಜಿಮಸ್ತಾನ್, ಪ್ರಮುಖರಾದ ಹುಸೇನ್‌ಬಾಷಾ, ತಿಮ್ಮಣ್ಣ ನಾಯಕ ಸೋಮನಮರಡಿ ಇತರರಿದ್ದರು.
ದೇವದುರ್ಗ: ಹಿಂಗಾರು ಬಿತ್ತನೆ ಮಾಡಿದ ರೈತರ ಅನುಕೂಲಕ್ಕಾಗಿ ನಾರಾಯಣಪುರ ಬಲದಂಡೆ ನಾಲೆಗೆ ಏ.10ರವರೆಗೆ ನಿರಂತರವಾಗಿ ನೀರು ಹರಿಸುವಂತೆ ಒತ್ತಾಯಿಸಿ ಪಟ್ಟಣದ ಮಿನಿವಿಧಾನಸೌಧದಲ್ಲಿ ಗ್ರೇಡ್-2 ತಹಸೀಲ್ದಾರ್ ಪರಶುರಾಮಗೆ ಕರ್ನಾಟಕ ರಾಜ್ಯ ರೈತ ಸಂಘದಿಂದ ಬುಧವಾರ ಮನವಿ ಸಲ್ಲಿಸಲಾಯಿತು.
ನಾರಾಯಣಪುರ ಬಲದಂಡೆ ನಾಲೆ ನೀರು ನಂಬಿಕೊಂಡು ರೈತರು ಭತ್ತ, ಸಜ್ಜೆ, ಮೆಣಸಿನಕಾಯಿ, ಸೂರ್ಯಕಾಂತಿ, ಶೇಂಗಾ ಸೇರಿ ವಿವಿಧ ಬೆಳೆ ಬೆಳೆದಿದ್ದಾರೆ. ಏ.3ಕ್ಕೆ ನೀರು ಬಂದ್ ಮಾಡಿದರೆ ಬೆಳೆಗಳು ಹಾಳಾಗಲಿವೆ.
ಏ.10ರವರೆಗೆ ನಿರಂತರವಾಗಿ ನೀರು ಹರಿಸಿದರೆ ಬೆಳೆಗಳು ಪೂರ್ಣ ಪ್ರಮಾಣದಲ್ಲಿ ಕೈಗೆ ಬರಲಿವೆ. ಅವೈಜ್ಞಾನಿಕ ವಾರಬಂದಿ ಪದ್ಧತಿಯಿಂದ ಕೊನೇಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಏ.3ರಂದು ನೀರು ಬಂದ್ ಮಾಡಿದರೆ ಕಾಳುಕಟ್ಟಿರುವ ಬೆಳೆಗಳು ಶೇ.80 ಹಾಳಾಗಲಿವೆ.
ಆದ್ದರಿಂದ ರೈತರ ಬೆಳೆ ಉಳಿಸಲು ಸರ್ಕಾರ ಏ.10ರವರೆಗೆ ನಾಲೆ ನೀರು ಹರಿಸಬೇಕು. ಈ ಬಗ್ಗೆ ಕೂಡಲೇ ನೀರಾವರಿ ಇಲಾಖೆ ಅಧಿಕಾರಿಗಳು ಆದೇಶ ಹೊರಡಿಸಬೇಕು. ನಿರ್ಲಕ್ಷ್ಯ ಮಾಡಿದರೆ ಮಾ.30ರಂದು ರಾಜ್ಯ ಹೆದ್ದಾರಿ ಸಂಚಾರ ತಡೆದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಇಂಗಳದಾಳ, ಜಿಲ್ಲಾ ಉಪಾಧ್ಯಕ್ಷ ಹನುಮಗೌಡ ನಾಯಕ, ತಾಲೂಕು ಅಧ್ಯಕ್ಷ ಹಾಜಿಮಸ್ತಾನ್, ಪ್ರಮುಖರಾದ ಹುಸೇನ್‌ಬಾಷಾ, ತಿಮ್ಮಣ್ಣ ನಾಯಕ ಸೋಮನಮರಡಿ, ಮುದ್ದಯ್ಯ ಮುಂಡರಗಿ, ಸಿದ್ದಪ್ಪ ಪೂಜಾರಿ, ರವಿ ಗಬ್ಬೂರು ಇದ್ದರು.