ಕುಡಿವ ನೀರಿನ ಸಮಸ್ಯೆ ಆಗದಿರಲಿ

ಲಿಂಗಸುಗೂರು ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕುಡಿವ ನೀರಿನ ಟಾಸ್ಕ್‌ಫೋರ್ಸ್ ಸಭೆಯಲ್ಲಿ ಶಾಸಕ ಮಾನಪ್ಪ ಡಿ.ವಜ್ಜಲ್ ಮಾತನಾಡಿದರು. ಜಿಪಂ ಲೆಕ್ಕಾಧಿಕಾರಿ ವಿಜಯಶಂಕರ, ತಾಪಂ ಇಒ ಉಮೇಶ ಇದ್ದರು.
ಲಿಂಗಸುಗೂರು ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕುಡಿವ ನೀರಿನ ಟಾಸ್ಕ್‌ಫೋರ್ಸ್ ಸಭೆಯಲ್ಲಿ ಶಾಸಕ ಮಾನಪ್ಪ ಡಿ.ವಜ್ಜಲ್ ಮಾತನಾಡಿದರು. ಜಿಪಂ ಲೆಕ್ಕಾಧಿಕಾರಿ ವಿಜಯಶಂಕರ, ತಾಪಂ ಇಒ ಉಮೇಶ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಿಡಿಒಗಳಿಗೆ ಶಾಸಕ ಮಾನಪ್ಪ ವಜ್ಜಲ್ ಸೂಚನೆ
  • ಲಿಂಗಸುಗೂರು ತಾಲೂಕು ಮಟ್ಟದ ಟಾಸ್ಕ್‌ಫೋರ್ಸ್ ಸಭೆ
ಲಿಂಗಸುಗೂರು: ಬೇಸಿಗೆಯಲ್ಲಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕುಡಿವ ನೀರಿನ ಸಮಸ್ಯೆಯಾದರೆ ಸಂಬಂಧಪಟ್ಟ ಗ್ರಾಪಂ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಶಾಸಕ ಮಾನಪ್ಪ ಡಿ.ವಜ್ಜಲ್ ಎಚ್ಚರಿಕೆ ನೀಡಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಕುಡಿವ ನೀರಿನ ತಾಲೂಕು ಮಟ್ಟದ ಟಾಸ್ಕ್‌ಫೋರ್ಸ್ ಸಭೆಯಲ್ಲಿ ಮಾತನಾಡಿದರು. ತಾಲೂಕಿನ 30 ಗ್ರಾಪಂ ವ್ಯಾಪ್ತಿಯ ಹಳ್ಳಿಗಳು, ದೊಡ್ಡಿ, ತಾಂಡಾಗಳಲ್ಲಿ ಕುಡಿವ ನೀರಿನ ಸಮಸ್ಯೆ ಇರುವುದನ್ನು ಪರಿಶೀಲಿಸಿ ಪರಿಹಾರ ಕಂಡುಕೊಳ್ಳಲು ಗ್ರಾಪಂ ಅಧಿಕಾರಿಗಳು ಕೂಡಲೇ ತಾಪಂಗೆ ವರದಿ ನೀಡಬೇಕು. ಪಟ್ಟಣ ಪ್ರದೇಶಗಳಾದ ಲಿಂಗಸುಗೂರು, ಹಟ್ಟಿ, ಮುದಗಲ್‌ನಲ್ಲಿ ಕುಡಿವ ನೀರಿನ ಸಮಸ್ಯೆಯಾಗದಂತೆ ಪುರಸಭೆ ಮುಖ್ಯಾಧಿಕಾರಿಗಳು ನೋಡಿಕೊಳ್ಳಬೇಕೆಂದು ಸೂಚಿಸಿದರು.
ನವಲಿ ಗ್ರಾಮದ ರಾಂಪುರ ಏತ ನೀರಾವರಿ ಯೋಜನೆಯ ಜಾಕ್‌ವೆಲ್ ವಿದ್ಯುತ್ ಪರಿವರ್ತಕವು ಕೃಷ್ಣಾ ನದಿ ಹಿನ್ನೀರಿನಲ್ಲಿದ್ದು, ಸ್ಥಳಾಂತರಿಸುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಪತ್ರ ಬರೆದರೂ ಕ್ರಮ ಕೈಗೊಂಡಿಲ್ಲ. ಪಕ್ಕದಲ್ಲಿರುವ ಟಿಸಿ ಬಳಸಲಾಗುತ್ತಿದ್ದು, ಮುದಗಲ್‌ಗೆ ಕುಡಿವ ನೀರಿನ ಪೂರೈಕೆಗೂ ಇದೇ ಟಿಸಿ ಬಳಸುತ್ತಿದ್ದರಿಂದ ಮುಂದೆ ತೊಂದರೆಯಾಗಲಿದೆ. ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಪಿಡಿಒ ಪ್ರವೀಣಕುಮಾರ ಕೋರಿದರು. ವಿದ್ಯುತ್ ಪೂರೈಕೆಯಲ್ಲಿ ತೊಂದರೆಯಾಗಿ ನೀರಿನ ಸಮಸ್ಯೆಯಾದರೆ ಜೆಸ್ಕಾಂ ಎಇಇ ಹೊಣೆಯಾಗುತ್ತಾರೆ ಎಂದು ಶಾಸಕ ವಜ್ಜಲ್ ಹೇಳಿದರು.
ತಾಪಂ ಇಒ ಉಮೇಶ ಮಾತನಾಡಿ, ಗ್ರಾಪಂ ಆಡಳಿತಾಧಿಕಾರಿಗಳು, ಪಿಡಿಒಗಳು ಹಳ್ಳಿಗಳಿಗೆ ಭೇಟಿ ನೀಡಿ, ಕುಡಿವ ನೀರಿನ ಸಮಸ್ಯಾತ್ಮಕ ಹಳ್ಳಿಗಳ ಪಟ್ಟಿ ಮಾಡಿ ಮೂರು ದಿನಗಳಲ್ಲಿ ವರದಿ ನೀಡಬೇಕು. ಒಂದು ವಾರದಲ್ಲಿ ಜಿಪಂ ಸಭೆ ನಡೆಸಲಿದ್ದು, ಅಷ್ಟರೊಳಗೆ ಸಮಗ್ರ ವರದಿ ನೀಡಬೇಕು. ಸಮಸ್ಯೆ ಇರುವ ಕಡೆ ಖಾಸಗಿ ಬೋರ್‌ವೆಲ್‌ಗಳಿದ್ದರೆ ಗುರುತಿಸಬೇಕು. ನೀರಿನ ತೊಟ್ಟಿಗಳನ್ನು ಸ್ವಚ್ಛ ಮಾಡಿ, ಅವುಗಳ ಜಿಪಿಎಸ್ ಪೋಟೋಗಳನ್ನು ಕಳಿಸಬೇಕು ಎಂದು ತಿಳಿಸಿದರು. ಜಿಪಂ ಲೆಕ್ಕಾಧಿಕಾರಿ ವಿಜಯಶಂಕರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net