ಸಿಂಧನೂರಿನ ಕಾರ್ಮಿಕ ಇಲಾಖೆ ಕಚೇರಿ ಮುಂದೆ ಎಐಸಿಸಿಟಿಯುನಿಂದ ಪ್ರತಿಭಟನೆ ನಡೆಸಲಾಯಿತು. ಎಐಟಿಯುಸಿ ರಾಜ್ಯ ಸಹ ಕಾರ್ಯದರ್ಶಿ ನಾಗರಾಜ ಪೂಜಾರ್, ಪ್ರಮುಖರಾದ ಬಸವರಾಜ ಕೊಂಡೆ, ಶರಣಪ್ಪ ಉದ್ಬಾಳ, ವೀರೇಶ ಜವಳಗೇರಾ ಇತರರಿದ್ದರು.
ಸಿಂಧನೂರು: ರಾಜ್ಯ ಸರ್ಕಾರ ಕನಿಷ್ಠ ವೇತನ ಪರಿಷ್ಕರಣೆಯನ್ನು ಹಿಂಪಡೆಯುವ ಅಥವಾ ಮರುಪರಿಶೀಲಿಸುವ ಯಾವುದೇ ಕ್ರಮ ಕೈಗೊಳ್ಳಬಾರದೆಂದು ಒತ್ತಾಯಿಸಿ ಕಾರ್ಮಿಕ ಇಲಾಖೆ ಕಚೇರಿ ಮುಂದೆ ಎಐಸಿಸಿಟಿಯುನಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಬಾಕಿ ಉಳಿದಿದ್ದ ಕನಿಷ್ಠ ವೇತನ ಪರಿಷ್ಕರಣೆಯನ್ನು ದೀರ್ಘಕಾಲದ ಚರ್ಚೆ, ಕಾರ್ಮಿಕ ಸಲಹಾ ಮಂಡಳಿ ಶಿಫಾರಸು ಹಾಗೂ ಕಾನೂನುಬದ್ಧ ಪ್ರಕ್ರಿಯೆ ಮೂಲಕ ಜಾರಿಗೊಳಿಸಲಾಗಿದೆ. ಇದನ್ನು ಹಿಂಪಡೆದರೆ ಲಕ್ಷಾಂತರ ಕಾರ್ಮಿಕರ ಹಕ್ಕುಗಳಿಗೆ ಧಕ್ಕೆ ಆಗಲಿದೆ. ರಾಜ್ಯದ ಒಂದು ಕೋಟಿಗೂ ಹೆಚ್ಚು ಕಾರ್ಮಿಕ ಕುಟುಂಬಗಳಿಗೆ ಈ ಪರಿಷ್ಕರಣೆಯಿಂದ ಪ್ರಯೋಜನವಾಗಲಿದ್ದು, ಅವರ ಖರೀದಿ ಸಾಮರ್ಥ್ಯ ಹೆಚ್ಚುವುದರ ಜತೆಗೆ ರಾಜ್ಯದ ಆರ್ಥಿಕತೆಯೂ ಬಲಗೊಳ್ಳಲಿದೆ. ಉದ್ಯೋಗದಾತರ ಒತ್ತಡಕ್ಕೆ ಮಣಿದು ಸರ್ಕಾರ ಅಧಿಸೂಚನೆ ಹಿಂಪಡೆಯಬಾರದು.
ಕನಿಷ್ಠ ವೇತನ ಪರಿಷ್ಕರಣೆಗೆ ಸಂಬಂಧಿಸಿದ ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿದ್ದು, ಸರ್ಕಾರ ನ್ಯಾಯಾಲಯದಲ್ಲಿ ಕಾರ್ಮಿಕರ ಪರ ದೃಢವಾಗಿ ನಿಲ್ಲಬೇಕು ಎಂದರು. ಈಗಾಗಲೇ ಹಲವು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ಪರಿಷ್ಕೃತ ವೇತನ ಜಾರಿಗೊಳಿಸಿದ್ದು, ಅದನ್ನು ಹಿಂಪಡೆಯುವುದು ಕಾನೂನುಬಾಹಿರ. ಸರ್ಕಾರ ಪರಿಷ್ಕರಣೆಯನ್ನು ಹಿಂಪಡೆದರೆ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ಹಾಗೂ ರಾಜ್ಯಮಟ್ಟದ ಬಂದ್ ಸೇರಿದಂತೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಎಐಟಿಯುಸಿ ರಾಜ್ಯ ಸಹ ಕಾರ್ಯದರ್ಶಿ ನಾಗರಾಜ ಪೂಜಾರ್, ಪ್ರಮುಖರಾದ ಬಸವರಾಜ ಕೊಂಡೆ, ಶರಣಪ್ಪ ಉದ್ಬಾಳ, ವೀರೇಶ ಜವಳಗೇರಾ, ದೇವೇಂದ್ರಪ್ಪ, ನಿಂಗಪ್ಪ ಬೇರಿಗಿ, ಮೌನೇಶ ಕವಿತಾಳ, ದುರುಗೇಶ, ವೀರೇಶ ಕೇಸರಿ, ಶರಣಪ್ಪ, ನಾಗರಾಜ ನಾಯಕ್, ಅಮರೇಶ, ಹುಸೇನಪ್ಪ, ದಾನಪ್ಪ ಇದ್ದರು.