ಸಿಂಧನೂರಿನಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಕಾರ್ಯಕ್ರಮ ನಡೆಯಿತು. ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಮೇರಿ, ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಹಿರೇಮಠ್, ಶಾಲೆಯ ಆಡಳಿತಾಧಿಕಾರಿ ಅದಿತಿ, ಪಿಎಚ್‌ಸಿಒ ಕಮಲಾ, ಮುಖ್ಯಶಿಕ್ಷಕ ಮಲ್ಲಿಕಾರ್ಜುನ ಅಂಗಡಿ ಇತರರಿದ್ದರು.
ಮಕ್ಕಳಲ್ಲಿ ಜಂತುಹುಳು ಬಾಧೆ ತಡೆಗಟ್ಟುವ ಮೂಲಕ ಅವರ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಬೇಕು ಎಂದು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮೇರಿ ಹೇಳಿದರು.
ರಾಷ್ಟ್ರೀಯ ಜಂತುಹುಳು ನಿವಾರಣೆ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸೋಮವಾರ ಮಾತನಾಡಿದರು. ಮನುಷ್ಯ ಹಾಗೂ ಪ್ರಾಣಿಗಳ ಕರುಳಿನಲ್ಲಿ ಬೆಳೆಯುವ ಜಂತುಹುಳುಗಳು ಪರಾವಲಂಬಿಗಳಾಗಿವೆ. ಕಲುಷಿತ ನೀರು, ಆಹಾರ ಹಾಗೂ ಸ್ವಚ್ಛತೆ ಕೊರತೆಯಿಂದ ಇವು ದೇಹವನ್ನು ಸೇರುತ್ತವೆ. ಹೊಟ್ಟೆ ನೋವು, ಹಸಿವು ಕಡಿಮೆಯಾಗುವುದು, ತೂಕ ಇಳಿಕೆ, ಗುದದ್ವಾರದ ಬಳಿ ತುರಿಕೆ, ಸುಸ್ತು ಹಾಗೂ ರಕ್ತಹೀನತೆ ಮುಂತಾದ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು ಎಂದರು.
ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಹಿರೇಮಠ್ ಮಾತನಾಡಿ, ಜಂತುಹುಳು ಬಾಧೆಯಿಂದ ಮಕ್ಕಳಲ್ಲಿ ಅಪೌಷ್ಟಿಕ ಹಾಗೂ ರಕ್ತಹೀನತೆ ಉಂಟಾಗಿ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗುವ ಸಾಧ್ಯತೆ ಇದೆ. ಸ್ವಚ್ಛತೆ ಹಾಗೂ ಸೂಕ್ತ ಆರೋಗ್ಯ ಕ್ರಮಗಳ ಮೂಲಕ ಜಂತುಹುಳು ಬಾಧೆಯನ್ನು ಸುಲಭವಾಗಿ ನಿಯಂತ್ರಿಸಬಹುದು ಎಂದರು.