ದೇವದುರ್ಗದಲ್ಲಿ ಜೆಡಿಎಸ್ ತಾಲೂಕು ಘಟಕ ಅಧ್ಯಕ್ಷರಾಗಿ ನೇಮಕವಾದ ಬಸನಗೌಡ ದೇಸಾಯಿಗೆ ಮಾಜಿ ಸಚಿವ ವೆಂಕಟರಾವ ನಾಡಗೌಡ ಪಕ್ಷದ ಧ್ವಜನೀಡಿ ಅಧಿಕಾರ ಹಸ್ತಾಂತರಿಸಿದರು. ಶಾಸಕಿ ಕರೆಮ್ಮ ಜಿ.ನಾಯಕ, ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ, ಮಹಾಂತೇಶ ಪಾಟೀಲ್ ಅತ್ತನೂರು, ಮುಖಂಡರಾದ ಶಿವಶಂಕರ ವಕೀಲ, ಸಿದ್ದಯ್ಯತಾತ ಮುಂಡರಗಿ ಇತರರಿದ್ದರು.
ದೇವದುರ್ಗ: ರಾಜ್ಯ ಸರ್ಕಾರದಲ್ಲಿ ನಾಯಕತ್ವ ಬದಲಾದರೂ ಹದಗೆಟ್ಟಿರುವ ರಾಜ್ಯದ ಆರ್ಥಿಕತೆ ಬದಲಾಗಲ್ಲ. ಹದಗೆಟ್ಟ ಆರ್ಥಿಕ ಡಕೋಟಾ ಬಸ್‌ಗೆ ಸಿಎಂ ಡಿ.ಕೆ. ಶಿವಕುಮಾರ ಹೊಸ ಡ್ರೈವರ್ ಅಷ್ಟೇ ಎಂದು ಮಾಜಿ ಸಚಿವ ವೆಂಕಟರಾವ ನಾಡಗೌಡ ಕುಟುಕಿದರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಿದ್ದ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಶುಕ್ರವಾರ ಮಾತನಾಡಿದರು. ಅವೈಜ್ಞಾನಿಕ ಗ್ಯಾರಂಟಿ ಯೋಜನೆಯಿಂದ ಆರ್ಥಿಕತೆ ಹಾಳಾಗಿದೆ. ಅಭಿವೃದ್ಧಿ ಕೆಲಸಗಳು ಬಂದ್ ಆಗಿ ರಾಜ್ಯದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಸಚಿವರು ರಾಜೀನಾಮೆ ನೀಡುತ್ತಿದ್ದಾರೆ. 2028ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ಭವಿಷ್ಯ ನುಡಿದರು.
ಎಸ್‌ಐಆರ್ ಮತದಾರರ ಪಟ್ಟಿ ಶುದ್ಧೀಕರಿಸುವ ಪ್ರಕ್ರಿಯೆಯಾಗಿದೆ. ಕಾಂಗ್ರೆಸ್ ನಾಯಕರು ನಾಲ್ಕಾರು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿದ್ದಾರೆ. ಆ ಹೆಸರು ಡಿಲಿಟ್ ಆಗುತ್ತೆ ಎನ್ನುವ ಆತಂಕದಲ್ಲಿ ವಿರೋಧಿಸುತ್ತಿದ್ದಾರೆ. ಮುಸ್ಲಿಮರ ಹೆಸರು ಡಿಲಿಟ್ ಮಾಡ್ತಾರೆ ಎನ್ನುವ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ದೂರಿದರು.
ಸರ್ವರ ಅಪೇಕ್ಷೆಯಂತೆ ಕೆಲಸ ಮಾಡುವೆ
ದೇವದುರ್ಗ: ಮೂರು ವರ್ಷಗಳ ಆಡಳಿತ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸಿದ್ದೇನೆ. ಪ್ರತಿಪಕ್ಷದ ನಾಯಕರು ಬಾಯಿ ಬಿಡದಂತೆ ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದು ಶಾಸಕಿ ಕರೆಮ್ಮ ಜಿ.ನಾಯಕ ಹೇಳಿದರು. ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸದನದಲ್ಲಿ ನಾನು ವಿರೋಧ ಪಕ್ಷದಲ್ಲಿದ್ದರೂ ಸಮಸ್ಯೆ ಬಗ್ಗೆ ಧ್ವನಿ ಎತ್ತಿದ್ದೇನೆ. ಸಚಿವರ ಮನವೊಲಿಸಿ ಅನುದಾನ ತಂದಿದ್ದು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ. ಮುಂದಿನ ಎರಡು ವರ್ಷ ಕ್ಷೇತ್ರದ ಜನರು, ಕಾರ್ಯಕರ್ತರ ಅಪೇಕ್ಷೆಯಂತೆ ಕೆಲಸ ಮಾಡುವೆ ಎಂದರು. ಅರಕೇರಾ ಹಾಗೂ ದೇವದುರ್ಗ ತಾಲೂಕು ಜೆಡಿಎಸ್ ಘಟಕವನ್ನು ಸಾಮಾಜಿಕ ನ್ಯಾಯದಡಿ ರಚನೆ ಮಾಡಲಾಗಿದೆ. ಪಕ್ಷದ ಹುದ್ದೆ ಎನ್ನುವುದು ಅಧಿಕಾರವಲ್ಲ ಅದೊಂದು ಜವಾಬ್ದಾರಿಯಾಗಿದೆ. ಮುಂದಿನ ದಿನಗಳಲ್ಲಿ ಪಕ್ಷದ ರಜತ ಮಹೋತ್ಸವಕ್ಕೆ ಸಿದ್ಧತೆ ಕೈಗೊಳ್ಳಲಾಗುವುದು ಎಂದರು.