ಡಿಸಿ ನಿತೀಶ್ ಕೆ., ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆ ಜಿಲ್ಲಾ ವ್ಯಾಪ್ತಿಯ ಎಲ್ಲ ರಸ್ತೆಗಳಲ್ಲಿನ ತಗ್ಗು ಗುಂಡಿ ಮುಚ್ಚಲು ಕ್ರಮವಹಿಸಲು ಸೂಚನೆ

meeting
meeting
Published on

ರಾಯಚೂರು

ಸಾರ್ವಜನಿಕರಿಗೆ ಸುಗಮ ಸಾರಿಗೆ ಕಲ್ಪಿಸುವ ಹಿನ್ನೆಲೆಯಲ್ಲಿ ಎನ್‌ಎಚ್‌ಎಐ ರಸ್ತೆಗಳು ಸೇರಿದಂತೆ, ಲೋಕೋಪಯೋಗಿ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಹಾಗೂ ಇನ್ನೀತರ ಇಲಾಖೆಗಳ ಅಧೀನದ ಎಲ್ಲ ರಸ್ತೆಗಳಲ್ಲಿನ ತಗ್ಗು ಗುಂಡಿಗಳನ್ನು ಕೂಡಲೇ ಗುರುತಿಸಿ ಯುದ್ದೋಪಾದಿಯಲ್ಲಿ ರಸ್ತೆಗಳನ್ನು ಸರಿಪಡಿಸುವ ಕಾರ್ಯ ಮಾಡಬೇಕೆಂದು ಜಿಲ್ಲಾಧಿಕಾರಿ ನಿತೀಶ್ ಕೆ., ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಭವನದಲ್ಲಿ ಶನಿವಾರ ಸಂಜೆ ಜಿಲ್ಲಾಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಜಿಲ್ಲೆಯಾದ್ಯಂತ ಎಲ್ಲಾ ಕಡೆಗಿನ ರಸ್ತೆಗಳಲ್ಲಿ ಹಾಕಿರುವ ಹಂಪ್ಸಗಳು ಕಾಣುವುದೇ ಇಲ್ಲ. ಇದರಿಂದಾಗಿ ಹೆಚ್ಚಾಗಿ ದ್ವಿಚಕ್ರ ವಾಹನಗಳು ಮೇಲೆ ಪುಟಿದು ಅಪಘಾತಕ್ಕೀಡಾಗುತ್ತವೆ. ಈ ಬಗ್ಗೆ ಕೂಡಲೇ ಗಮನ ಹರಿಸಿ ಅವೈಜ್ಞಾನಿಕವಾಗಿ ಹಾಕಿದ ಎಲ್ಲ ಹಂಪ್ಸಗಳನ್ನು ಸರಿಪಡಿಸಬೇಕು. ಕಡ್ಡಾಯವಾಗಿ ಎರಡೂ ಬದಿಯಲ್ಲಿ ಬಿಳಿಪಟ್ಟಿ ಅಳವಡಿಸಿ ಹಂಪ್ಸ್ ಕಾಣುವ ಹಾಗೆ ಸುರಕ್ಷತಾ ಕ್ರಮಕ್ಕೆ ಕೂಡಲೇ ಮುಂದಾಗಬೇಕು. ಗ್ರಾಮೀಣ, ತಾಲೂಕು, ಜಿಲ್ಲಾ ಸೇರಿದಂತೆ ಎಲ್ಲಾ ರಸ್ತೆಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿ ಅಪಘಾತ ರಹಿತ ಸಂಚಾರಕ್ಕೆ ಅಗತ್ಯ ಕ್ರಮವಹಿಸಬೇಕೆಂದು ನಿರ್ದೇಶನ ನೀಡಿದರು.
ಅಂತಾರಾಜ್ಯ ಹೈದ್ರಾಬಾದ್ ಸೇರಿದಂತೆ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಶಕ್ತಿನಗರ ಬಳಿಯಲ್ಲಿನ ಬೈಪಾಸನಲ್ಲಿನ ಅಪಘಾತ ಪ್ರಕರಣಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಈ ಬಗ್ಗೆ ತುರ್ತಾಗಿ ಗಮನ ಹರಿಸಿ, ಲೋಕೋಪಯೋಗಿ ಇಲಾಖೆಯ ಸುಪರ್ದಿಯಲ್ಲಿನ ಒತ್ತುವರಿ ರಸ್ತೆಯನ್ನು, ವಶಕ್ಕೆ ಪಡೆದು ಡಾಂಬರೀಕರಣಗೊಳಿಸಿ ರಸ್ತೆ ಅಗಲೀಕರಣಕ್ಕೆ ಕ್ರಮ ವಹಿಸಬೇಕೆಂದು ಸೂಚನೆ ನೀಡಿದರು.

ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ ಮಾತನಾಡಿ, ರಸ್ತೆ ನಿರ್ವಹಣಾ ಟೆಂಡರ್ ಕರೆದಿದ್ದು, ನಗರದ ರಸ್ತೆಗಳಲ್ಲಿನ ತಗ್ಗು ಗುಂಡಿ ಮುಚ್ಚುವ ಕಾರ್ಯ ನಡೆದಿದೆ. ರಸ್ತೆ ಸರಿಪಡಿಸುವ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆದಾಗ್ಯೂ ನಗರದಲ್ಲಿನ ರಸ್ತೆಗಳಲ್ಲಿ ತಗ್ಗು ಗುಂಡಿಗಳು ಹಾಗೆ ಇವೆ ಎಂದು ದೂರುಗಳು ಬಂದಲ್ಲಿ ಯಾವುದೇ ಕೆಲಸವನ್ನು ಅನುಮೋದಿಸಲಾಗುವುದಿಲ್ಲ ಎಂದು ಎಂಜಿನಿಯರ್‌ಗಳಿಗೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಇಂಜಿನೇಯರ್ ವೆಂಕಟೇಶ ಗಳಗ,ಎಎಸ್ಪಿ ಕುಮಾರ ಸ್ವಾಮಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net