ಜಿಲ್ಲಾಡಳಿತದಿಂದ ದೇವರ ದಾಸಿಮಯ್ಯ ಆಚರಣೆ

ರಾಯಚೂರಿನ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಸೋಮವಾರ ಶ್ರೀ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮಕ್ಕೆ ಎಎಸ್ಪಿ ಕುಮಾರಸ್ವಾಮಿ ಚಾಲನೆ ನೀಡಿದರು.  ಪಾಲಿಕೆಯ ಸದಸ್ಯ ಕಾರ್ಯದರ್ಶಿ ಕೃಷ್ಣಾ ಶಾವಂತಗೇರಾ, ಸಾಹಿತಿ ರಮೇಶಬಾಬು ಯಾಳಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಉತ್ತರಾದೇವಿ, ಸಮಾಜದ ಪ್ರಮುಖರಾದ ಜಿ.ನಾಗರಾಜ ಮಾನವಿ, ದೊಡ್ಡ ಈರಣ್ಣ, ಉದಯ ಕುಮಾರ, ಹೆಚ್. ವೆಂಕಟೇಶ, ಮೈಕಲ್ ಬಾಬು, ದತ್ತಾತ್ರೇಯ, ವಿಠ್ಠಲ್, ಪುಷ್ಪವಂತಿ, ನಾಗರಾಜ್, ಶ್ರೀನಿವಾಸ ಕೆ.ಎನ್. ಇದ್ದರು.
ರಾಯಚೂರಿನ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಸೋಮವಾರ ಶ್ರೀ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮಕ್ಕೆ ಎಎಸ್ಪಿ ಕುಮಾರಸ್ವಾಮಿ ಚಾಲನೆ ನೀಡಿದರು. ಪಾಲಿಕೆಯ ಸದಸ್ಯ ಕಾರ್ಯದರ್ಶಿ ಕೃಷ್ಣಾ ಶಾವಂತಗೇರಾ, ಸಾಹಿತಿ ರಮೇಶಬಾಬು ಯಾಳಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಉತ್ತರಾದೇವಿ, ಸಮಾಜದ ಪ್ರಮುಖರಾದ ಜಿ.ನಾಗರಾಜ ಮಾನವಿ, ದೊಡ್ಡ ಈರಣ್ಣ, ಉದಯ ಕುಮಾರ, ಹೆಚ್. ವೆಂಕಟೇಶ, ಮೈಕಲ್ ಬಾಬು, ದತ್ತಾತ್ರೇಯ, ವಿಠ್ಠಲ್, ಪುಷ್ಪವಂತಿ, ನಾಗರಾಜ್, ಶ್ರೀನಿವಾಸ ಕೆ.ಎನ್. ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸನ್ಮಾರ್ಗದೆಡೆಗೆ ದಾಸಿಮಯ್ಯ ನಡೆಸಿದವರು- ಎಎಸ್ಪಿ
  • ಶ್ರೀ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ
  • ಧರ್ಮ ಹಾಗೂ ವರ್ಣ ಬೇದವಿಲ್ಲ.
ರಾಯಚೂರು ಸರಳ ಭಾಷೆಯಲ್ಲಿ ಸರ್ವರಿಗೂ ಅರಿಯುವಂತೆ ವಚನಗಳನ್ನು ರಚಿಸಿದ ದೇವರ ದಾಸಿಮಯ್ಯ ಸ್ವಸ್ಥ ಸಮಾಜ ನಿರ್ಮಾಣ ಮಾಡಿ ಸನ್ಮಾರ್ಗದೆಡೆಗೆ ನಡೆಸಿದರೆಂದು ಎಎಸ್ಪಿ ಕುಮಾರಸ್ವಾಮಿ ಹೇಳಿದರು.
ನಗರದ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಶ್ರೀ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವಚನಕಾರರಲ್ಲಿ ಆದಿ ವಚನಕಾರರೆಂದು ಹೆಸರುವಾಸಿಯಾಗಿ, ಸಮಾಜದಲ್ಲಿ ಎಲ್ಲರೂ ಒಂದೇ ಆಗಿದ್ದಾರೆ. ಇಲ್ಲಿ ಜಾತಿ, ಲಿಂಗ, ಧರ್ಮ ಹಾಗೂ ವರ್ಣ ಬೇದವಿಲ್ಲ. ಎಲ್ಲರೂ ಸಮನಾಗಿ, ಉತ್ತಮ ಜೀವನವನ್ನು ನಡೆಸಬೇಕೆಂಬ ಸಂದೇಶಗಳನ್ನು ತಮ್ಮ ವಚನಗಳ ಮೂಲಕ ಇಡೀ ಜಗತ್ತಿಗೆ ದಾಸಿಮಯ್ಯ ಅವರು ತಿಳಿಸಿದ್ದು, ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು.
ಪಾಲಿಕೆಯ ಸದಸ್ಯ ಕಾರ್ಯದರ್ಶಿ ಕೃಷ್ಣಾ ಶಾವಂತಗೇರಾ ಅವರು ಮಾತನಾಡಿ, ವಿಶ್ವ ಹಾಗೂ ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ ಅಪಾರವಾದದ್ದು, ಬಸವಣ್ಣನವರಿಗಿಂತಲೂ ಮುಂಚಿತವಾಗಿಯೇ 11ನೇ ಶತಮಾನದಲ್ಲಿ ವಚನ ಸಾಹಿತ್ಯವನ್ನು ಹುಟ್ಟಿಹಾಕಿದವರು ದೇವರ ದಾಸಿಮಯ್ಯನವರಾಗಿದ್ದಾರೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಒಂದು ವರ್ಷದಲ್ಲಿ ಸುಮಾರು 33 ಜಯಂತಿಗಳನ್ನು ಆಚರಣೆ ಮಾಡಲಾಗುತ್ತದೆ. ಅದರಲ್ಲಿ ದೇವರದಾಸಿಮಯ್ಯ ಜಯಂತಿಯೂ ಒಂದಾಗಿದ್ದು, ದೇವರ ದಾಸಿಮಯ್ಯನವರು ವಚನ ಸಂಗ್ರಹ ಹೊತ್ತಿಗೆಯ ಮೂಲಕ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಿದ್ದಾರೆ. ರಾಮನಾಥ ಎಂಬ ಅಂಕಿತದಿಅದ ಹಲವು ವಚನಗಳನ್ನು ರಚಿಸಿ, ಸಮಾಜಕ್ಕೆ ಉತ್ತಮ ಹಾದಿಯನ್ನು ಹಾಕಿಕೊಟ್ಟಿದ್ದಾರೆ ಎಂದರು.
ಮಾನ್ವಿ ಪಟ್ಟಣದ ಸಾಹಿತಿ ರಮೇಶಬಾಬು ಯಾಳಗಿ ಅವರು ಮಾತನಾಡಿ, ದಾಸಿಮಯ್ಯ ಜಯಂತಿ ಕೇವಲ ಒಂದು ಸಮಾಜಕ್ಕೆ ಸೀಮಿತವಾಗದೇ. ಇಡೀ ಮನುಕುಲಕ್ಕೆ ಸಂಭ್ರಮದ ಹಬ್ಬವಾಗಬೇಕು. ಪ್ರತಿಯೊಬ್ಬರ ಬಾಳನ್ನು ಬೆಳಗಿಸುವ ಸದ್ಗುಣಗಳು ವಚನಗಳಲ್ಲಿ ಅಡಗಿದ್ದು, ವರ್ತನೆಗಳನ್ನು ಸರಿಪಡಿಸುವ, ಸರಿದಾರಿಯಲ್ಲಿ ನಡೆಯಲು ವಚನಗಳು ಸಹಕಾರಿಯಾಗಿವೆ ಎಂದು ಹೇಳಿದರು.
ದೇವರ ದಾಸಿಮಯ್ಯ ವಚನಗಳ ಮೂಲಕ ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಶ್ರಮಿಸಿದರು. ಅವರ 176 ವಚನಗಳು ಇದುವರೆಗೂ ಲಭ್ಯವಾಗಿವೆ. ದಾಸಿಮಯ್ಯನವರ ವಚನಗಳ ಸಾರವನ್ನು ಮಕ್ಕಳಿಗೆ ಯುವಜನತೆಗೆ ತಿಳಿಸಿ ಸುಸಂಸ್ಕೃತರನ್ನಾಗಿ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಮೊದಲು ಶ್ರೀ ದೇವರ ದಾಸಿಮಯ್ಯ ಭಾವಚಿತ್ರಕ್ಕೆ ತಹಶೀಲ್ದಾರ್ ಸುರೇಶ ವರ್ಮ, ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಪ್ರಾರಂಭವಾದ ಮೆರವಣಿಗೆಯು ನಗರದ ಸಾರ್ವಜನಿಕ ಉದ್ಯಾನವನದ ಮಾರ್ಗವಾಗಿ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದವರೆಗೆ ನಡೆಯಿತು.ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು.
ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ಜಿ.ನಾಗರಾಜ ಮಾನವಿ, ದೊಡ್ಡ ಈರಣ್ಣ, ಉದಯ ಕುಮಾರ, ಹೆಚ್. ವೆಂಕಟೇಶ, ಮೈಕಲ್ ಬಾಬು, ದತ್ತಾತ್ರೇಯ, ವಿಠ್ಠಲ್, ಪುಷ್ಪವಂತಿ, ನಾಗರಾಜ್, ಶ್ರೀನಿವಾಸ ಕೆ.ಎನ್., ಶಿವಾನಂದ, ಬಸವರಾಜ ಸೇರಿದಂತೆ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net