ಸಿಂಧನೂರು: ಕಾರ್ಯಕ್ರಮದಲ್ಲಿ ಎಂಎಲ್ಸಿ ಬಸನಗೌಡ ಬಾದರ್ಲಿ ಮಾತನಾಡಲು ಅವಕಾಶ ನೀಡದೆ ದಿಢೀರನೇ ಕಾರ್ಯಕ್ರಮ ಮುಗಿಸಿದ್ದರಿಂದ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾದರು.
ಶಾಸಕ ಹಂಪನಗೌಡ ಬಾದರ್ಲಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಮುಗಿಯುತ್ತಿದ್ದಂತೆ, ಮೈಕ್ ಬದಿಗಿಟ್ಟು, ಬಸ್ ಉದ್ಘಾಟನೆಗೆ ತೆರಳಿದರು. ಇದೇ ವೇಳೆ ವೇದಿಕೆ ಮೇಲಿದ್ದ ಬಸನಗೌಡಗೆ ಮಾತನಾಡಲು ಅವಕಾಶ ಸಿಗಲಿಲ್ಲ. ಹೀಗಾಗಿ ಅವರ ಬೆಂಬಲಿಗರು, ಡಿಪೋ ವ್ಯವಸ್ಥಾಪಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಘಟನೆಯಿಂದ ಮುಜುಗರಕ್ಕೀಡಾದ ಬಸನಗೌಡ ಬಾದರ್ಲಿ, ಅವರ ಕಚೇರಿಗೆ ತೆರಳಿದರು. ಆಗ ಬೆಂಬಲಿಗರು, ಎಂಎಲ್ಸಿ ಅವರನ್ನು ಕಾರ್ಯಕ್ರಮಕ್ಕೆ ಕರೆದು ಅಗೌರವ ತೋರಲಾಗಿದೆಂದು ಡಿಪೋ ವ್ಯವಸ್ಥಾಪಕ ಹೊನ್ನಪ್ಪ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿ ವಿರುದ್ಧ ಹರಿಹಾಯ್ದರು. ಅಲ್ಲದೆ ಡಿಪೋ ಗೇಟ್ ಬಂದ್ ಮಾಡಿ ಹೋರಾಟಕ್ಕೆ ಮುಂದಾದರು.
ಬಳಿಕ ಅಂಬಾದೇವಿ ದೇವಸ್ಥಾನದ ಬಳಿ ರಸ್ತೆಯಲ್ಲಿ ಕುಳಿತು ಬಸ್ ಸಂಚಾರಕ್ಕೆ ಅಡ್ಡಿಪಡಿಸಿದರು. ನಗರ ಠಾಣೆ ಪಿಐ ವೀರಾರೆಡ್ಡಿ, ಮನವೊಲಿಕೆಗೆ ಮುಂದಾದರೂ ಪ್ರಯೋಜನವಾಗಲಿಲ್ಲ. ಬಳಿಕ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಡಿವೈಎಸ್ಪಿ ಚಂದ್ರಶೇಖರ, ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಪೊಲೀಸ ಠಾಣೆಗೆ ಕರೆದೊಯ್ದು ಬಳಿಕ ಬಿಟ್ಟು ಕಳಿಸಿದರು.