ಈರುಳ್ಳಿ ಬೆಲೆ ಕುಸಿತದ ನಂತರ ರೋಗಬಾಧೆ ಕಾಟ

ವಟಗಲ್ ಸೀಮಾದಲ್ಲಿ ಬೆಳೆದ ಈರುಳ್ಳಿಗೆ ರೋಗ ಕಾಣಿಸಿಕೊಂಡಿದೆ.
ವಟಗಲ್ ಸೀಮಾದಲ್ಲಿ ಬೆಳೆದ ಈರುಳ್ಳಿಗೆ ರೋಗ ಕಾಣಿಸಿಕೊಂಡಿದೆ.
Published on

ಪ್ರಮುಖ ಮುಖ್ಯಾಂಶಗಳು

  • ಕ್ರಿಮಿನಾಶಕ ಸಿಂಪಡಿಸಲು ರೈತರ ಹಿಂದೇಟು
  • ಕವಿತಾಳ ಭಾಗದಲ್ಲಿ ಬೆಳೆ ನಾಶಕ್ಕೆ ಮುಂದು
ಕವಿತಾಳ: ಈರುಳ್ಳಿ ಬೆಳೆದವರು ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಡುವೆ ಈರುಳ್ಳಿಗೆ ರೋಗಬಾಧೆ ಕಾಣಿಸಿಕೊಂಡಿದ್ದು, ಕ್ರಿಮಿನಾಶಕ ಸಿಂಪಡಿಸಲು ಹಿಂದೇಟು ಹಾಕುತ್ತಿರುವ ರೈತರು ಬೆಳೆ ನಾಶ ಪಡಿಸಲು ಮುಂದಾಗಿದ್ದಾರೆ.
ಕಳೆದ ತಿಂಗಳು ಸುರಿದ ಸತತ ಮಳೆಗೆ ಈರುಳ್ಳಿ ಬೆಲೆ ಇಳಿಕೆಯಾಗಿದ್ದು, ವರುಣ ಬಿಡುವು ಕೊಟ್ಟರೂ ದರ ಇನ್ನೂ ಹೆಚ್ಚಿಲ್ಲ. ಇದರಿಂದ ರೈತರು ಚಿಂತೆಗೀಡಾಗಿದ್ದಾರೆ. ಹೊಲಗಳಲ್ಲೇ ಬಿಟ್ಟಿದ್ದ ಈರುಳ್ಳಿಗೆ ಈಗ ರೋಗಬಾಧೆ ಕಾಡತೊಡಗಿದೆ. ರೋಗ ಹತೋಟಿಗೆ ತರಲು ಕ್ರಿಮಿನಾಶಕ ಸಿಂಪಡಿಸಬೇಕಾದ ಅನಿವಾರ್ಯತೆ ಇದೆ. ಆದರೆ, ಮಾರುಕಟ್ಟೆಯಲ್ಲಿ ಬೆಲೆ ಇಲ್ಲದ ಕಾರಣ ಕ್ರಿಮಿನಾಶಕ ಸಿಂಪಡಣೆಗಾಗಿ ಹಣ ಖರ್ಚು ಮಾಡಿದರೆ ಮತ್ತಷ್ಟು ಹೊರೆಯಾಗಲಿದೆ ಎಂದು ಹಿಂದೇಟು ಹಾಕುತ್ತಿದ್ದಾರೆ. ಬಹುತೇಕ ರೈತರು ಬೆಳೆ ನಾಶಪಡಿಸಲು ಮುಂದಾಗಿದ್ದಾರೆ.
ಈ ಭಾಗದ ಕವಿತಾಳ, ಯಕ್ಲಾಸಪುರದಲ್ಲಿ ರೈತರು ಜಮೀನುಗಳಿಗೆ ಕುರಿಗಳನ್ನು ಮೇಯಲು ಬಿಡುತ್ತಿದ್ದಾರೆ. ನೆಲಕೋಳದಲ್ಲಿ ಬೆಳೆ ನಾಶಪಡಿಸಿದ್ದಾರೆ. ಅಮೀನಗಡದಲ್ಲಿ ಕೊಳೆಯುತ್ತಿರುವ ಬೆಳೆ ನೋಡಿ ಮಮ್ಮಲ ಮರಗುತ್ತಿದ್ದಾರೆ. ಇನ್ನು ಹಲವು ಕಡೆ ಯಾಕಾದರೂ ಈರುಳ್ಳಿ ಬೆಳೆದೆವು ಎಂದು ಚಿಂತೆಗೆ ಒಳಗಾಗಿದ್ದಾರೆ. ಇತ್ತ ತೋಟಗಾರಿಕೆ, ಕಂದಾಯ, ಕೃಷಿ ಇಲಾಖೆಯಿದ್ದರೂ ಪ್ರಯೋಜನವಿಲ್ಲದಂತಾಗಿದೆ. ಕೆಲ ರೈತರು ಪರಿಹಾರಕ್ಕಾಗಿ ಮನವಿ ಮಾಡಿದರೆ ನಿಮ್ಮ ಹೊಲದಲ್ಲಿ ಹತ್ತಿ-ತೊಗರಿ ಜಿಪಿಎಸ್ ಆಗಿದ್ದು, ಈರುಳ್ಳಿ ನಾಟಿ ಮಾಡಿದರೂ ಜಿಪಿಎಸ್‌ನಲ್ಲಿ ತೊಗರಿ ಬೆಳೆ ತೋರಿಸುತ್ತಿದೆ ಎನ್ನುತ್ತಿದ್ದಾರೆ. ಕೆಲವರು ಅಧಿಕಾರಿಗಳ ಜತೆ ಜಗಳವಾಡಿ ಮರಳಿ ಈರುಳ್ಳಿ ಬೆಳೆಯನ್ನು ಜಿಪಿಎಸ್ ಮಾಡಿಸಿದ್ದಾರೆ. ಆದರೆ, ಅದಕ್ಕೂ ಪರಿಹಾರ ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಲಾದರೂ ಅಳಿದುಳಿದ ಈರುಳ್ಳಿ ಬೆಳೆಗೆ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿ ರೈತರ ನೆರವಿಗೆ ಧಾವಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಎರಡು ಎಕರೆಯಲ್ಲಿ ಒಂದು ಲಕ್ಷ ರೂ.ಗೂ ಹೆಚ್ಚು ಖರ್ಚು ಮಾಡಿ ಈರುಳ್ಳಿ ನಾಟಿ ಮಾಡಿದ್ದೇವೆ. ಬೆಲೆಯಿಲ್ಲದ ಕಾರಣ ಕೀಳದೆ ಹೊಲದಲ್ಲೇ ಬಿಟ್ಟಿದ್ದೇವೆ. ಕೊಳೆಯುತ್ತಿರುವ ಕಾರಣ ಕುರಿಗಳ ಮೇಯಿಸಲು ಕೊಟ್ಟಿದ್ದೇವೆ. ಕೆಲವರ ಈರುಳ್ಳಿ ಬೆಳೆಗೆ ರೋಗ ಕಾಣಿಸಿಕೊಂಡಿದೆ. ಸರ್ಕಾರ ಈರುಳ್ಳಿಗೆ ಬೆಂಬಲ ಬೆಲೆ ಕೊಡಬೇಕು. ಇಲ್ಲವಾದರೆ ಸೂಕ್ತ ಪರಿಹಾರ ನೀಡಬೇಕು.
"

ಎರಡು ಎಕರೆಯಲ್ಲಿ ಒಂದು ಲಕ್ಷ ರೂ.ಗೂ ಹೆಚ್ಚು ಖರ್ಚು ಮಾಡಿ ಈರುಳ್ಳಿ ನಾಟಿ ಮಾಡಿದ್ದೇವೆ. ಬೆಲೆಯಿಲ್ಲದ ಕಾರಣ ಕೀಳದೆ ಹೊಲದಲ್ಲೇ ಬಿಟ್ಟಿದ್ದೇವೆ. ಕೊಳೆಯುತ್ತಿರುವ ಕಾರಣ ಕುರಿಗಳ ಮೇಯಿಸಲು ಕೊಟ್ಟಿದ್ದೇವೆ. ಕೆಲವರ ಈರುಳ್ಳಿ ಬೆಳೆಗೆ ರೋಗ ಕಾಣಿಸಿಕೊಂಡಿದೆ. ಸರ್ಕಾರ ಈರುಳ್ಳಿಗೆ ಬೆಂಬಲ ಬೆಲೆ ಕೊಡಬೇಕು. ಇಲ್ಲವಾದರೆ ಸೂಕ್ತ ಪರಿಹಾರ ನೀಡಬೇಕು.

— ಬಾಲಮ್ಮ ರೈತ ಮಹಿಳೆ, ಯಕ್ಲಾಸಪುರ
"

ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕುಸಿತವಾಗಿರುವುದು, ರೋಗ ಬಾಧೆ ಕಾಡುತ್ತಿರುವುದು ಗಮನಕ್ಕೆ ಇದೆ. ಪರಿಹಾರ ನೀಡುವ ಪ್ರಕ್ರಿಯೆ ಸರ್ಕಾರ ಮಟ್ಟದಲ್ಲಿ ನಡೆಯುವಂತದ್ದು. ಕೆಲವೆಡೆ ಈರುಳ್ಳಿ ಬೆಳೆದರೂ ಜಿಪಿಎಸ್‌ನಲ್ಲಿ ಬೇರೆ ಬೆಳೆ ತೋರಿಸುತ್ತಿರುವುದು ಕಂದಾಯ ಇಲಾಖೆಗೆ ಸಂಬಂಧಿಸಿದ್ದಾಗಿದೆ. ನಮ್ಮ ಇಲಾಖೆಯಿಂದ ರೈತರ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು.

— ಮಹ್ಮದ್ ಅಲಿ ಉಪನಿರ್ದೇಶಕ, ತೋಟಗಾರಿಕೆ ಇಲಾಖೆ, ರಾಯಚೂರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net