ದೇವದುರ್ಗದ ಬಂಕ್‌ಗಳಲ್ಲಿ ಡೀಸೆಲ್ ಖಾಲಿ ಖಾಲಿ

ದೇವದುರ್ಗದಲ್ಲಿ ಡೀಸೆಲ್‌ಗಾಗಿ ಬಂಕ್ ಮುಂದೆ ಕ್ಯಾನ್ ಹಿಡಿದು ಸಾಲುಗಟ್ಟಿ ನಿಂತ ರೈತರು.
ದೇವದುರ್ಗದಲ್ಲಿ ಡೀಸೆಲ್‌ಗಾಗಿ ಬಂಕ್ ಮುಂದೆ ಕ್ಯಾನ್ ಹಿಡಿದು ಸಾಲುಗಟ್ಟಿ ನಿಂತ ರೈತರು.
Published on
ದೇವದುರ್ಗ: ಪಟ್ಟಣ ಸೇರಿ ತಾಲೂಕಿನಲ್ಲಿ ತೈಲ ಬಿಕ್ಕಟ್ಟು ಮುಂದುವರಿದಿದ್ದು, ಪೆಟ್ರೋಲ್ ಸಿಕ್ಕರೂ ಡೀಸೆಲ್ ದೊರೆಯದ ಸ್ಥಿತಿಯಿದೆ. ತಾಲೂಕಿನ ಬಹುತೇಕ ಬಂಕ್‌ಗಳಲ್ಲಿ ಇಂಧನ ಕೊರತೆ ಕಾಡುತ್ತಿದೆ. ಟ್ರ್ಯಾಕ್ಟರ್, ಟಿಪ್ಪರ್, ಕಾರು ಮಾಲೀಕರು ಗಂಟೆಗಟ್ಟಲೆ ಕಾಯುತ್ತಿದ್ದಾರೆ.
ಪಟ್ಟಣದ ಖೇಣೇದ್ ಪೆಟ್ರೋಲ್ ಬಂಕ್, ಜಾಲಹಳ್ಳಿ, ಗಬ್ಬೂರಿನ ತಲಾ ಒಂದು ಬಂಕ್ ಹೊರತುಪಡಿಸಿದರೆ ಬೇರೆಲ್ಲೂ ಡೀಸೆಲ್ ಸಿಗುತ್ತಿಲ್ಲ. ಕೆಲ ಬಂಕ್‌ಗಳಲ್ಲಿ ಪೆಟ್ರೋಲ್ ಸಹ ಸಿಗದ ಸ್ಥಿತಿಯಿದೆ. ಕೆಲಕಡೆ ಪೆಟ್ರೋಲ್ ಸಿಕ್ಕರೂ ಬೈಕ್‌ಗಳ ಸಾಲು ಹೆಚಿರುತ್ತದೆ. ಗ್ರಾಮೀಣ ಭಾಗದ ಜನರು ಹಾಗೂ ಟ್ರ್ಯಾಕ್ಟರ್ ಮಾಲೀಕರು ಕ್ಯಾನ್, ಬ್ಯಾರೆಲ್, ಬಾಟಲ್ ಹಿಡಿದು ಕಾಯುತ್ತಿದ್ದಾರೆ.
ನಾಲ್ಕೈದು ಬಂಕ್‌ಗಳಿಗೆ ಓಡಾಡಿದರೆ ಬೈಕ್‌ಗೆ ಪೆಟ್ರೋಲ್ ಸಿಗಲಿದೆ. ಆದರೆ ಡೀಸೆಲ್ ಮಾತ್ರ ಎಲ್ಲಿಯೂ ಸಿಗುತ್ತಿಲ್ಲ. ಡೀಸೆಲ್ ಹೊತ್ತು ಬರುವ ಲಾರಿಗೆ ಬಂಕ್ ಮಾಲೀಕರು ಚಾತಕ ಪಕ್ಷಿಯಂತೆ ಕಾಯುತ್ತಾರೆ. ಕೆಲವೆಡೆ ಟ್ರ್ಯಾಕ್ಟರ್ ಮಾಲೀಕರು, ರೈತರು ರಾತ್ರಿಯಿಡೀ ಪಾಳಿ ಹೆಚ್ಚಿರುತ್ತಾರೆ. ಇನ್ನು ಗ್ರಾಮೀಣ ಭಾಗದಲ್ಲಿ ಬಿಡಿಯಾಗಿ ಮಾರಾಟ ಮಾಡಲು ಹನಿ ಪೆಟ್ರೋಲ್, ಡೀಸೆಲ್ ಸಿಗುತ್ತಿಲ್ಲ. ಇದರಿಂದ ರೈತರಿಗೆ ತೀವ್ರ ಸಮಸ್ಯೆಯಾಗುತ್ತಿದ್ದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸದ್ಯ ತಾಲೂಕಿನಲ್ಲಿ ಮಳೆ ಉತ್ತಮವಾಗಿ ಸುರಿದಿದ್ದರಿಂದ ಮುಂಗಾರು ಕೃಷಿ ಚಟುವಟಿಕೆಗಳು ಚುರುಕು ಪಡೆದಿವೆ. ಇಂಥ ಸಂದರ್ಭದಲ್ಲಿ ಡೀಸೆಲ್‌ಗೆ ಬೇಡಿಕೆ ಹೆಚ್ಚಾಗಿದೆ. ಆದರೆ, ಇಂಧನ ಸಿಗದೆ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಕೆಲವೆಡೆ ಬಿತ್ತನೆಕೂಡ ಪ್ರಾರಂಭವಾಗಿದ್ದು ಇಂಧನ ಕೊರತೆ ಕೃಷಿ ಚಟುವಟಿಕೆಗಳಿಗೆ ಹಿನ್ನಡೆ ತಂದಿದೆ. ಜೋಡೆತ್ತು ಹೊಂದಿನ ರೈತರಿಗೆ ಭಾರಿ ಡಿಮಾಂಡ್ ಬಂದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net