ಬೂದಿಬಸವನ ಪವಾಡ ಕಣ್ತುಂಬಿಕೊಂಡ ಭಕ್ತಗಣ

ಗಬ್ಬೂರಿನಲ್ಲಿ ಶ್ರೀ ಬೂದಿಬಸವೇಶ್ವರ ಜಾತ್ರೆ ನಿಮಿತ್ತ ಲಕ್ಷಾಂತರ ಭಕ್ತರ ಮಧ್ಯೆ ಮಹಾರಥೋತ್ಸವ ಜರುಗಿತು.
ಗಬ್ಬೂರಿನಲ್ಲಿ ಶ್ರೀ ಬೂದಿಬಸವೇಶ್ವರ ಜಾತ್ರೆ ನಿಮಿತ್ತ ಲಕ್ಷಾಂತರ ಭಕ್ತರ ಮಧ್ಯೆ ಮಹಾರಥೋತ್ಸವ ಜರುಗಿತು.
Published on

ಪ್ರಮುಖ ಮುಖ್ಯಾಂಶಗಳು

  • ಲಕ್ಷಾಂತರ ಜನರ ಮಧ್ಯೆ ಮಹಾರಥೋತ್ಸವ ಅದ್ದೂರಿ
  • ವಿವಿಧ ಮಠದ ಸ್ವಾಮೀಜಿಗಳು ಸಾಕ್ಷಿ
ದೇವದುರ್ಗ: ತಾಲೂಕಿನ ಭಕ್ತರ ಆರಾಧ್ಯದೈವ ಗಬ್ಬೂರು ಶ್ರೀ ಬೂದಿಬಸವೇಶ್ವರ ಜಾತ್ರೋತ್ಸವ ನಿಮಿತ್ತ ಗುರುವಾರ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಮಹಾರಥೋತ್ಸವ ಲಕ್ಷಾಂತರ ಭಕ್ತರ ಮಧ್ಯೆ ಅದ್ದೂರಿಯಾಗಿ ಜರುಗಿತು. 
ಬೆಳಗ್ಗೆ ಬೂದಿಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ, ಕ್ಷೀರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ವಿಶೇಷ ಪೂಜೆ ನೆರವೇರಿತು. ರಥೋತ್ಸವಕ್ಕೆ ಭಕ್ತರು ಹರಳೆಣ್ಣೆ ಅಭಿಷೇಕ ನೆರವೇರಿಸಿ, ಹೂವು, ಹಣ್ಣು, ಬಾಳೆದಿಂಡು, ಮಾವಿನ ಎಲೆಗಳಿಂದ ಮಹಾರಥವನ್ನು ಸಿಂಗರಿಸಿದ್ದರು. ಸಂಜೆ 5ಗಂಟೆಗೆ ಶ್ರೀಮಠದ ಕರ್ತೃ ಗದ್ದುಗೆಯಿಂದ ಊರೊಳಗಿನ ಶ್ರೀಮಠದವರೆಗೆ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಪಲ್ಲಕ್ಕಿ, ನಂದಿಕೋಲು ಮೆರವಣಿಗೆ ಮಾಡಲಾಯಿತು. ನಂತರ ರಥಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಬೂದಿಬಸವ ಶಿವಾಚಾರ್ಯರ ಅಧ್ಯಕ್ಷತೆಯಲ್ಲಿ ಸಂಜೆ 5.30ಕ್ಕೆ ಸುಮಾರು 20ಎಕರೆ ಜಾಗದಲ್ಲಿ ತುಂಬಿದ್ದ ಲಕ್ಷಾಂತರ ಭಕ್ತರ ಮಧ್ಯೆ ಮಹಾರಥೋತ್ಸವ ಅದ್ದೂರಿಯಾಗಿ ಜರುಗಿತು. ಭಕ್ತರು ಹೂವು, ಹಣ್ಣು, ಉತ್ತತ್ತಿ, ಮಂಡಾಳು ಅರ್ಪಿಸಿ ಪುನೀತರಾದರು. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿಗಳು ಶ್ರೀಮಠಕ್ಕೆ ಭೇಟಿನೀಡಿ ಶ್ರೀಗಳ ಆಶೀರ್ವಾದ ಪಡೆದರು.
ಅಬ್ಬೆ ತುಮಕೂರಿನ ಡಾ.ಗಂಗಾಧರ ಸ್ವಾಮೀಜಿ, ಮೈಸೂರಿನ ಡಾ.ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯರು, ಅಂಕಲಿಮಠದ  ವೀರಭದ್ರ ಸ್ವಾಮೀಜಿ, ಸುಲ್ತಾನಪುರದ ಶಂಭುಸೋಮನಾಥ ಶಿವಾಚಾರ್ಯರು ಸೇರಿ ಗಣ್ಯರು ಭಾಗವಹಿಸಿದ್ದರು. 
ರಥಕ್ಕೆ ಅಭಿಷೇಕ: ಬೂದಿಬಸವೇಶ್ವರ ಜಾತ್ರೆ ನಿಮಿತ್ತ ಮಹಾರಥೋತ್ಸವ ಅಲಂಕಾರ ಹಾಗೂ ಔಡಲ ಎಣ್ಣೆ ಎರೆಯುವ ಕಾರ್ಯಕ್ರಮ ಗಮನ ಸೆಳೆಯಿತು. ಹರಕೆ ಹೊತ್ತ ಭಕ್ತರು ರಥಕ್ಕೆ ಔಡಲ ಎಣ್ಣೆಯಿಂದ ಅಭಿಷೇಕ ಮಾಡಿದರು.
50 ಅಡಿಯಿಂದ ತೈಲ ಎರೆಯುವ, ಗಾಲಿಗಳಿಗೆ ಅಭಿಷೇಕ ಮಾಡುವ ದೃಶ್ಯವನ್ನು ಭಕ್ತರು ಕಣ್ತುಂಬಿಕೊಂಡರು. ನಂತರ ಯುವಕರು ಹೂವು, ಹಣ್ಣು, ಬಾಳೆದಿಂಡು, ಮಾವಿನ ಎಲೆಗಳಿಂದ ಮಹಾರಥವನ್ನು ಸಿಂಗರಿಸಿದರು. ಮಹಿಳೆಯರು ಮಕ್ಕಳು ಸೇರಿ ಲಕ್ಷಾಂತರ ಭಕ್ತರು ಅಲ್ಲಿ ಸೇರಿದ್ದರು.

ಗವಿಶ್ರೀಗಳ ಆಶೀರ್ವಚನ ಇಂದು

ಜಾತ್ರೋತ್ಸವ ನಿಮಿತ್ತ ಜ.30ರಂದು ಜರುಗಲಿರುವ ಕಡೆ ಉಚ್ಛಾಯ, ಧಾರ್ಮಿಕಸಭೆ ಹಾಗೂ ನಗೆ ಕಲರವ ಕಾರ್ಯಕ್ರಮದಲ್ಲಿ ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಲಿದ್ದಾರೆ. ಸಂಜೆ 6ಕ್ಕೆ ಕಲಾವಿದರಾದ ಅಪ್ಪಣ್ಣ, ವಾಣಿಗೌಡ, ಸೂರಜ್, ದಿನೇಶ ಚಿಕ್ಕಮಗಳೂರು ಭಾಗವಹಿಸುವರು. ಬೂದಿಬಸವ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆವಹಿಸುವರು. ಮಾಲ್ವಿಮಠದ ಅಭಿನವ ಮಹಾಂತ ಸ್ವಾಮೀಜಿ, ಮಹಾಂತಲಿಂಗ ಸ್ವಾಮೀಜಿ, ಕನಕಗಿರಿ ಚನ್ನಮಲ್ಲ ಸ್ವಾಮೀಜಿ ಭಾಗವಹಿಸುವರು.
"

ಭಕ್ತರಿಗಾಗಿ ಶ್ರೀಮಠವಿದ್ದು ಸಾಮಾಜಿಕ ಕಾರ್ಯ ಮಾಡಲಾಗುತ್ತಿದೆ. ಜನರ ಒತ್ತಡ ಕಡಿಮೆ ಮಾಡಲು ಭಕ್ತಿ, ಮನರಂಜನೆಯೇ ಔಷಧ. ಹೀಗಾಗಿ ಹಾಸೋತ್ಸವ, ಸಂಗೀತ, ಜಾದೂ, ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ. ಭಕ್ತರು ನೋವು ಮರೆತು, ಕಾರ್ಯಕ್ರಮದಲ್ಲಿ ಭಾಗವಹಿಸಿ ಒತ್ತಡ ರಹಿತ ಜೀವನ ನಡೆಸಬೇಕು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net