ರಾಯರ ಮಠ ಸೇರಿ ಅನೇಕ ದೇವಾಲಯಕ್ಕೆ ಹರಿದು ಬಂದ ಭಕ್ತ ಸಮೂಹ

ಮಂತ್ರಾಲಯದ ಶ್ರೀ ರಾಘವೇಂದ್ರ ಮಠದಲ್ಲಿ  ಸಹಸ್ರಾರು ಭಕ್ತರು ಸೇರಿರುವುದು.
ಮಂತ್ರಾಲಯದ ಶ್ರೀ ರಾಘವೇಂದ್ರ ಮಠದಲ್ಲಿ ಸಹಸ್ರಾರು ಭಕ್ತರು ಸೇರಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಶೇ.50 ರಷ್ಟು ಮಹಿಳೆಯರು ಹೆಚ್ಚಿನ ಭೇಟಿ
  • ರಾಯರ ದರ್ಶನ ಪಡೆದ ಭಕ್ತರು ನಂತರ ಸುತ್ತಲಿನ ನಾನಾ ದೇಗುಲಗಳಿಗೂ ಭೇಟಿ
  • ರಾಜ್ಯದಲ್ಲಿ ಶಕ್ತಿಯೋಜನೆ ಜಾರಿ ಮಾಡಿದ ನಂತರ ವಿವಿಧ ನಗರಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತರು
ರಾಯಚೂರು ಹೊಸ ವರ್ಷಾಚರಣೆ ನಿಮಿತ್ತ ತುಂಗಭದ್ರೆ ತಟದಲ್ಲಿರುವ ಮಂತ್ರಾಲಯದಲ್ಲಿ ಹೊಸ ವರ್ಷ ಆಚರಿಸಲು ಸಹಸ್ರಾರು ಪ್ರವಾಸಿಗರು ಹಾಗೂ ಭಕ್ತರು ಆಸಕ್ತಿ ತೋರಿರುವುದರಿಂದ ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿ ಗುರುವಾರ ತುಂಗೆಯಲ್ಲಿ ಮಿಂದೆದ್ದು ಪುಣ್ಯಸ್ನಾನ ಮಾಡಿ, ರಾಯರ ದರ್ಶನ ಸೇರಿ ಅನೇಕ ದೇವಾಲಯದ ದರ್ಶನ ಪಡೆದರು.
ಕ್ರಿಸ್ ಮಸ್ ರಜೆ ಹಾಗೂ ಹೊಸ ವರ್ಷಾಚರಣೆಗೆ ದಿನ ಗಣನೆ ಹಿನ್ನೆಲೆಯಲ್ಲಿ ಅನೇಕರು ಧಾರ್ಮಿಕ ಕೇಂದ್ರಗಳಿಗೂ ಲಗ್ಗೆಯಿರಿಸಿದ್ದು ಮಂತ್ರಾಲಯ ಸೇರಿ ಜಿಲ್ಲೆಯ ವಿವಿಧ ದೇವಾಲಯದಲ್ಲಿ ಕಳೆದೊಂದು ವಾರದಿಂದ ಜನವೋ ಜನ ಎಂಬಂತಾಗಿದೆ.
ಹೊಸ ವರ್ಷದಲ್ಲಿ ಮೋಜು ಮಸ್ತಿ ಮಾಡದೆ ರಾಯರ ದರ್ಶನ ಪಡೆಯಲು ಆಗಮಿಸಿದ ಭಕ್ತರು ರಾಯರ ಆಲಂಕಾರವನ್ನು ಕಣ್ಣುಂಬಿಕೊಳ್ಳಲು ಆಗಮಿಸುವವರ ಸಂಖ್ಯೆಯೇ ಹೆಚ್ಚು. ಅಂತೆಯೇ ಶ್ರೀಮಠದಲ್ಲಿ ಭಕ್ತರ ದಂಡು ನೆರೆದಿದೆ. ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ ರಾಯರ ದರ್ಶನವನ್ನು ದಿನವೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಡೆಯುತ್ತಿದ್ದಾರೆ.

ಮಹಿಳೆಯರ ಸಂಖ್ಯೆ ಹೆಚ್ಚಳ

ರಾಜ್ಯದಲ್ಲಿ ಶಕ್ತಿಯೋಜನೆ ಜಾರಿ ಮಾಡಿದ ನಂತರ ಬೆಂಗಳೂರು,ಮೈಸೂರು ಸೇರಿದಂತೆ ವಿವಿಧ ನಗರಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತರು ರಾಯಚೂರು ತಾಲೂಕಿನ ಗಿಲ್ಲೇಸೂಗೂರು ಹಾಗೂ ಬಳ್ಳಾರಿ ಜಿಲ್ಲೆಗೆ ಆಗಮಿಸಿ ಅಲ್ಲಿಂದ ಟಿಕೆಟ್ ನೀಡಿ ಪ್ರಯಾಣ ಮಾಡುತ್ತಿದ್ದು, ಇದರಲ್ಲಿ ಈ ಮೊದಲು ಕುಟುಂಬದ ಜೊತೆಗೆ ಮಾತ್ರ ಮಹಿಳೆಯರು ಅಗಮಿಸುತ್ತಿದ್ದರು. ಆದರೆ ಇತ್ತೀಚಿಗೆ ಶಕ್ತಿ ಯೋಜನೆಯಿಂದ ಶ್ರೀಮಠ ಹಾಗೂ ಅನೇಕ ಧಾರ್ಮಿಕ ಕೇಂದ್ರಗಳಿಗೆ ಅಗಮಿಸುವ ಮಹಿಳೆಯರ ಸಂಖ್ಯೆ ಶೇ.50 ರಷ್ಟು ಹೆಚ್ಚಾಗಿದೆ.
ರಾಯರ ದರ್ಶನ ಪಡೆದ ಭಕ್ತರು ನಂತರ ಸುತ್ತಲಿನ ನಾನಾ ದೇಗುಲಗಳಿಗೂ ಭೇಟಿ ನೀಡುತ್ತಿದ್ದು, ಮಂತ್ರಾಲಯದಿಂದ ಉತ್ತರಕ್ಕೆ ಪಂಚಮುಖಿ ಶ್ರೀ ಪ್ರಾಣದೇವರ ಸನ್ನಿಧಿ, ಬಿಚ್ಚಾಲಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಏಕಶಿಲಾ ಬೃಂದಾವನ , ಕಲ್ಲೂರು ಶ್ರೀ ಮಹಾಲಕ್ಷ್ಮಿ, ಜಗನ್ನಾಥದಾಸರ ಸನ್ನಿಧಿ, ಚೀಕಲಪರ್ವಿಯ ವಿಜಯ ದಾಸರ ಜನ್ಮಸ್ಥಳ, ನಾರದಗಡ್ಡೆ ದತ್ತಾತ್ರೇಯ ದೇವಸ್ಥಾನ, ದೇವಸೂಗೂರಿನ ಕ್ಷೇತ್ರಪತಿ ಶ್ರೀ ಸೂಗುರೇಶ್ವರ ಸನ್ನಿಧಿ, ದೇವರಭೂಪರದ ಶ್ರೀ ಅಮರೇಶ್ವರ, ಜಲದುರ್ಗ ಕೋಟೆ,ಸಿಂಧನೂರಿನ ಗಾಂಧಿ ನಗರ ಹಾಗೂ ಅಂಬಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net