ದೇವದುರ್ಗ ಎಪಿಎಂಸಿಗೆ 2 ಕೋಟಿ ರೂ. ಆದಾಯ

ಆದನಗೌಡ
ಆದನಗೌಡ
Published on

ಪ್ರಮುಖ ಮುಖ್ಯಾಂಶಗಳು

  • ಅಧ್ಯಕ್ಷ ಆದನಗೌಡ ಬುಂಕಲದೊಡ್ಡಿ ಹೇಳಿಕೆ
  • 70 ಲಕ್ಷ ರೂ.ವೆಚ್ಚದಲ್ಲಿ ವಿವಿಧ ಕಾಮಗಾರಿ
Devdurga APMC earns Rs 2 crore in revenue
ದೇವದುರ್ಗ: ಜಡ್ಡುಗಟ್ಟಿದ ವ್ಯವಸ್ಥೆಯಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. 2024-25ರಲ್ಲಿ ಕಠಿಣ ಕಾನೂನು ರೂಪಿಸಿದ್ದರಿಂದ ಬಾಡಿಗೆ, ತೆರಿಗೆ ಸೇರಿ ವಿವಿಧ ಮೂಲಗಳಿಂದ ಎಪಿಎಂಸಿಗೆ ಎರಡು ಕೋಟಿ ರೂ. ಆದಾಯ ಸಂಗ್ರಹವಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ಆದನಗೌಡ ಬುಂಕಲದೊಡ್ಡಿ ಹೇಳಿದರು. 
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಹಿಂದೆ ವಾರ್ಷಿಕ 8-10 ಲಕ್ಷ ರೂ. ಆದಾಯ ಸಂಗ್ರಹ ಆಗುತ್ತಿರಲಿಲ್ಲ. ನಾನು ಅಧಿಕಾರವಹಿಸಿಕೊಂಡ ನಂತರ ಪಾರದರ್ಶಕ ಟೆಂಡರ್, ನಿಯಮಿತ ಬಾಡಿಗೆ ವಸೂಲಿ, ತೆರಿಗೆ ಸಂಗ್ರಹ ಮಾಡಿದ್ದರಿಂದ 2024-25ರ ಅವಧಿಯಲ್ಲಿ 2 ಕೋಟಿ ರೂ. ಆದಾಯ ಸಂಗ್ರಹಿಸಲಾಗಿದೆ. 2025-26ನೇ ಸಾಲಿನಲ್ಲಿ ಇದುವರೆಗೆ 50ಲಕ್ಷ ರೂ. ಆದಾಯ ಸಂಗ್ರಹವಾಗಿದೆ ಎಂದು ತಿಳಿಸಿದರು.
ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ ಕುರಿ, ದನಗಳು, ವ್ಯಾಪಾರಿ ಮಳಿಗೆಗಳ ಪ್ಲಾಟ್‌ಫಾರ್ಮ್ ನಿರ್ಮಾಣ, ಸಿಸಿ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ. ಬ್ರೋಕರ್‌ಗಳ ಹಾವಳಿ ತಡೆದಿದ್ದು ನಿಯಮಾನುಸಾರ ತೆರಿಗೆ ಸಂಗ್ರಹಿಸಲಾಗುತ್ತಿದೆ. ಹೊಸಕಚೇರಿ ನಿರ್ಮಾಣ ಹಾಗೂ ಆರು ಕೋಟಿ ರೂ.ವೆಚ್ಚದಲ್ಲಿ 20 ಹೊಸ ವಾಣಿಜ್ಯ ಮಳಿಗೆ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೆ ವೇಬ್ರಿಡ್ಜ್, ಎ.ವೆಂಕಟೇಶ ನಾಯಕ ಕಲ್ಯಾಣ ಮಂಟಪ ಅಭಿವೃದ್ಧಿ, ಹೊಸ ಪ್ಲಾಟ್ ಹಂಚಿಕೆಗೆ ಯೋಜನೆ ರೂಪಿಸಲಾಗಿದೆ ಎಂದರು.
ಹಿಂದೆ ವ್ಯಾಪಾರಿಗಳಿಗೆ ಹಂಚಿಕೆಯಾಗಿದ್ದ 57 ಪ್ಲಾಟ್‌ಗಳ ವಿವಾದ ಇತ್ಯರ್ಥ ಪಡಿಸಲಾಗಿದೆ. ಕೋರ್ಟ್ ಆದೇಶದಂತೆ 57 ಪ್ಲಾಟ್‌ಗಳನ್ನು ಪಾರದರ್ಶಕವಾಗಿ ಹಂಚಿಕೆ ಮಾಡಿದ್ದು, 43 ಪ್ಲಾಟ್ ನೋಂದಣಿಯಾಗಿವೆ. ವ್ಯಾಪಾರಿಗಳು ಪ್ರತಿ ಚದರ ಅಡಿಗೆ 300ರೂ. ನೀಡಿ ಅರ್ಜಿ ಹಾಕಿದ್ದರು. 30*40 ಸೈಜ್‌ಗೆ 5 ಲಕ್ಷ, 30*90 ಸೈಜ್ ಪ್ಲಾಟ್‌ಗೆ 10 ಲಕ್ಷ ರೂ. ಶುಲ್ಕ ತುಂಬಿದ್ದರು. ಅಂತಹವರಿಗೆ ನಿಯಮ ಪ್ರಕಾರ ಹಂಚಿಕೆ ಮಾಡಲಾಗಿದೆ. ಸದ್ಯ 34 ಉಳಿದಿದ್ದು, ಜಾಲಹಳ್ಳಿ ಎಪಿಎಂಸಿಯಲ್ಲಿ 30 ಪ್ಲಾಟ್ ಹಂಚಿಕೆಗೆ ಮುಂದಿನ ಹಂತಗಳಲ್ಲಿ ಯೋಜನೆ ರೂಪಿಸಲಾಗುವುದು ಎಂದು ಮಾಹಿತಿ ನೀಡಿದರು.
ಎಪಿಎಂಸಿ ಉಪಾಧ್ಯಕ್ಷ ಬಸನಗೌಡ ಶಿವಂಗಿ, ನಿರ್ದೇಶಕ ಮೌನಪ್ಪ ನಾಯಕ, ಮುಖಂಡರಾದ ಬಸವರಾಜ ಪಂಪಾಪತಿ, ಶಾಂತಪ್ಪ, ಶಿವರಾಜ ಗೆಜ್ಜೆಬಾವಿ, ರಾಮಣ್ಣ ಡಿ.ಕರಡಿಗುಡ್ಡ, ಶರಣಗೌಡ ಗೌರಂಪೇಟೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net