ದೇವದುರ್ಗದಲ್ಲಿ ಆರಕ್ಷಕ ಉಪನಿರೀಕ್ಷಕರ ಕಚೇರಿಯ ಪೇದೆ ಶಿವಣ್ಣಗೆ ರೈತ ಸಂಘ ಹಾಗೂ ಹಸಿರು ಸೇನೆ ಅರಕೇರಾ ತಾಲೂಕು ಘಟಕ ಗುರುವಾರ ಮನವಿ ಸಲ್ಲಿಸಿತು.ಪದಾಧಿಕಾರಿಗಳಾದ ಮಲ್ಲನಗೌಡ, ಉಮಾದೇವಿ ನಾಯಕ, ದೇವಿಕಾ, ಶಿವಪುತ್ರಪ್ಪ ಗೌಡ, ಮಲ್ಲೇಶ ನಾಯಕ, ತಿಮ್ಮನಗೌಡ, ಮರಿಲಿಂಗ ಪಾಟೀಲ್, ಹನುಮಗೌಡ ಚಡಕಲಗುಡ್ಡ ಇದ್ದರು.
ಅರಕೇರಾ: ತಾಲೂಕಿನಲ್ಲಿ ಕಾನೂನು ಬಾಹಿರ ಮತ್ತು ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕೆಂದು ಒತ್ತಾಯಿಸಿ ರೈತ ಸಂಘ-ಹಸಿರು ಸೇನೆ ತಾಲೂಕು ಘಟಕ ಗುರುವಾರ ದೇವದುರ್ಗದ ಆರಕ್ಷಕ ಉಪನಿರೀಕ್ಷಕರ ಕಚೇರಿಯ ಪೇದೆ ಶಿವಣ್ಣಗೆ ಮನವಿ ಸಲ್ಲಿಸಿತು.
ಸಂಘದ ತಾಲೂಕು ಅಧ್ಯಕ್ಷ ಹರ್ಷವರ್ಧನ ನಾಯಕ ದೊರೆ ಮಾತನಾಡಿ, ತಾಲೂಕಿನಲ್ಲಿ ಕಳ್ಳತನ, ಪುಂಡ ಪೋಕರಿ ಹಾಗೂ ಕುಡುಕರ ಹಾವಳಿ ಹಾಗೂ ಅಕ್ರಮ ಚಟುವಟಿಕೆಗಳ ನಿಯಂತ್ರಿಸುವ ನಿಟ್ಟಿನಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಅಗತ್ಯವಿದೆ. ತಾಲೂಕಿನಲ್ಲಿ ಪ್ರತ್ಯೇಕ ಪೊಲೀಸ್ ಠಾಣೆ ಇಲ್ಲದಿರುವುದರಿಂದ ಗ್ರಾಮಸ್ಥರು ಹಾಗೂ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ರಾತ್ರಿ ವೇಳೆ ಮನೆ ಹೊರಗೆ ಹೋಗಲು ಸಹ ಜನರು ಹಿಂಜರಿಯುವ ಸ್ಥಿತಿ ಉಂಟಾಗಿದೆ ಎಂದು ದೂರಿದರು.
ಇತ್ತೀಚಿಗೆ ತಾಲೂಕಿನ ಸುತ್ತಲಿನ ಗ್ರಾಮಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾತ್ರಿ ಸಮಯದಲ್ಲಿ ಕುಡುಕರು ಹಾಗೂ ಪುಂಡ ಪೋಕರಿಗಳ ಹಾವಳಿ ಹೆಚ್ಚಾಗಿ ಕಂಡುಬರುತ್ತಿದೆ. ಇದರ ಪರಿಣಾಮವಾಗಿ ಮಹಿಳೆಯರು ಮತ್ತು ವೃದ್ಧರು ಸ್ವತಂತ್ರವಾಗಿ ಓಡಾಟ ನಡೆಸಲು ಅಸುರಕ್ಷಿತವಾಗಿದೆ. ಸಾರ್ವಜನಿಕರ ರಕ್ಷಣೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಅರಕೇರಾ ತಾಲೂಕಿನಲ್ಲಿ ಹೆಚ್ಚುವರಿಯಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ, ರಾತ್ರಿ ಪೇಟ್ರೋಲಿಂಗ್ ವ್ಯವಸ್ಥೆಯನ್ನು ಬಲಪಡಿಸಬೇಕೆಂದು ಮನವಿ ಮಾಡಿದರು.