ರಾಯಚೂರಿನ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಪದವಿ ಪೂರ್ವ ಬಾಲಕರ ವಸತಿ ನಿಲಯದ ವಾರ್ಡನನನ್ನು ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿ ಗುರುವಾರ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರ ಕಚೇರಿ ಪ್ರತಿಭಟನೆ ಮಾಡಿದರು. ಪರಿಷತ್ ನಗರಾಧ್ಯಕ್ಷ ಕೆ.ವಸಂತ ಕುಮಾರ, ಕಾರ್ಯದರ್ಶಿ ಕುಮಾರ , ಅಭಿಲಾಷೆ, ವಿಕಾಸ ರಾಥೋಡ್, ಮಂಜುನಾಥ, ದೇವರಾಜ, ಧನರಾಜ್, ಚಂದ್ರಶೇಖರ, ರಂಗನಾಥ, ರಮೇಶ ಇದ್ದರು.
ರಾಯಚೂರು ಕಳೆದ ಒಂದು ವಾರದಿಂದ ನಗರದ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಪದವಿ ಪೂರ್ವ ಬಾಲಕರ ವಸತಿ ನಿಲಯ ಆರಂಭವಾಗಿದ್ದರೂ ವಿದ್ಯಾರ್ಥಿಗಳಿಗೆ ಊಟ ಮತ್ತು ಕುಡಿಯುವ ನೀರು ಸೌಲಭ್ಯ ಕಲ್ಪಿಸದೇ ವಾರ್ಡನ್ ಬೇಜಬ್ದಾರಿ ಹಾರಿಕೆ ಉತ್ತರ ನೀಡುತ್ತಿದ್ದು, ಕೂಡಲೇ ಅವರನ್ನು ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿ ಗುರುವಾರ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರ ಕಚೇರಿ ಪ್ರತಿಭಟನೆ ಮಾಡಿದರು.
ಜೂ.1 ರಿಂದ ವಸತಿ ನಿಲಯಗಳು ಆರಂಭವಾಗಿದ್ದು ವಾರ್ಡನ್ ಮಹಿಬೂಬ್ ವಿದ್ಯಾರ್ಥಿಗಳಿಗೆ ಕರೆ ಮಾಡಿ ವಸತಿ ನಿಲಯ ಆರಂಭವಾಗಿದೆ ಬಂದು ಸೇರಿಕೊಳ್ಳಲು ತಿಳಿಸಿದ್ದರಿಂದ ವಿದ್ಯಾರ್ಥಿಗಳು ಹಲವು ತಾಲೂಕು ಮತ್ತು ಜಿಲ್ಲೆಗಳಿಂದ ಆಗಮಿಸಿದ್ದು ಇದೀಗ ಕಳೆದ ಮೂರ್ನಾಲ್ಕು ದಿನದಿಂದ ಊಟ ಮತ್ತು ಕುಡಿ ಯುವ ನೀರಿನ ಸೌಲಭ್ಯ ಕಲ್ಪಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು.
ವಸತಿ ನಿಲಯದಲ್ಲಿ ಸುಮಾರು 150 ವಿದ್ಯಾರ್ಥಿಗಳಿದ್ದು, ಹೊರಗಡೆಯೇ ಊಟ ಮತ್ತು ನೀರು ಪಡೆದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕರೆಗೆ ಉತ್ತರ ನೀಡುತ್ತಿಲ್ಲವೆಂದು ಆರೋಪಿಸಿದರು. ವಸತಿ ನಿಲಯಕ್ಕೆ ಅನ್ಯ ವ್ಯಕ್ತಿಗಳು ಪ್ರವೇಶ ಮಾಡುತ್ತಾರೆ ಎಂದು ವಿದ್ಯಾರ್ಥಿಗಳೇ ರಾತ್ರಿ ಸಮಯದಲ್ಲಿ ಗೇಟ್ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ವಸತಿ ನಿಲಯ ವಾರ್ಡನ್ ಮಹಿಬೂಬ್ ಸ್ಪಂದಿಸದೇ ಯಾರಿಗೆ ಬೇಕಾದರೂ ಹೇಳಿ, ಪ್ರತಿಭಟನೆ ನಡೆಸಿ ಕೇಳೋದಿಲ್ಲವೆಂದು ಉತ್ತರಿಸುತ್ತಿದ್ದಾರೆ. ಕೂಡಲೇ ವಾರ್ಡನ್ ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಬೇಕು. ಊಟ ಮತ್ತು ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪರಿಷತ್ ನಗರಾಧ್ಯಕ್ಷ ಕೆ.ವಸಂತ ಕುಮಾರ, ಕಾರ್ಯದರ್ಶಿ ಕುಮಾರ , ಅಭಿಲಾಷೆ, ವಿಕಾಸ ರಾಥೋಡ್, ಮಂಜುನಾಥ, ದೇವರಾಜ, ಧನರಾಜ್, ಚಂದ್ರಶೇಖರ, ರಂಗನಾಥ, ರಮೇಶ ಸೇರಿದಂತೆ ಅನೇಕರು ಇದ್ದರು.