ಆಶಾ ಕಾರ್ಯ ಕರ್ತೆಯರ ಗೌರವಧನ ಹಾಗೂ ಕಳೆದ 34 ತಿಂಗಳಿಂದ ಬಾಕಿ ಉಳಿದ ಪ್ರೋತ್ಸಾಹಧನವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಸೋಮವಾರ ರಾಯಚೂರಿನ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ಮಾಡಿದರು. ಸಂಘದ ಜಿಲ್ಲಾಧ್ಯಕ್ಷೆ ಗೌರಮ್ಮ ಹೊಸಮನಿ, ಕಾರ್ಯದರ್ಶಿ ಶೋಭಾ, ಈರಮ್ಮ ದೇವದುಗಧ, ಪ್ರಭಾವತಿ, ಮಲ್ಲಮ್ಮ, ಲವೀನಾ, ದೇವಮ್ಮ, ಸುಜಾತ, ಭೀಮಮ್ಮ, ಲಕ್ಷ್ಮೀ ರಾಗಿಮಾನಗಡ್ಡ, ಚೈತ್ರಾ, ಕಾರ್ಮಿಕ ಮುಖಂಡರಾದ ಅಣ್ಣಪ್ಪ ಶಿರಶ್ಯಾಡ್, ಮಹೇಶ ಚೀಕಲಪರ್ವಿ, ಎನ್.ಎಸ್.ವೀರೇಶ ಇದ್ದರು.
ಆಶಾ ಕಾರ್ಯಕರ್ತೆಯರ ಗೌರವಧನ ಹಾಗೂ ಕಳೆದ 34 ತಿಂಗಳಿಂದ ಬಾಕಿ ಉಳಿದ ಪ್ರೋತ್ಸಾಹಧನವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಸೋಮವಾರ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ಮಾಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಏಪ್ರಿಲ್ 21 ರಂದು ಹೊರಡಿಸಿದ ಪತ್ರದಂತೆ ಆಶಾ ನಿಧಿ ತಂತ್ರಾಂಶದಲ್ಲಿ ಒಂಬತ್ತು ವಿವಿಧ ಸೇವೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಇದರಿಂದ ಪ್ರತಿಯೊಬ್ಬ ಆಶಾ ಕಾರ್ಯಕರ್ತೆಗೆ ತಿಂಗಳಿಗೆ 500ರಿಂದ 1,000ರವರೆಗೆ ಪ್ರೋತ್ಸಾಹಧನ ಕಡಿತವಾಗುವ ಸಾಧ್ಯತೆ ಇದೆ. ಆದ್ದರಿಂದ ಆ ಸೇವೆಗಳನ್ನು ಮುಂದುವರಿಸಿ, ಪ್ರೋತ್ಸಾಹಧನ ನೀಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ರಾಜ್ಯಾದ್ಯಂತ ಆಶಾ ಕಾರ್ಯಕರ್ತೆ ಯರಿಗೆ ಕೇಂದ್ರ ಸರ್ಕಾರದ ಪ್ರೋತ್ಸಾಹಧನ ಅವರು ನಿರ್ವಹಿಸುವ ಕೆಲಸದ ಪ್ರಮಾಣಕ್ಕೆ ಅನುಗುಣವಾಗಿ ದೊರೆಯುತ್ತಿಲ್ಲ. ಈ ಸಮಸ್ಯೆಯನ್ನು ತಕ್ಷಣ ಬಗೆಹರಿಸಿ ಬಾಕಿ ಇರುವ ಎಲ್ಲಾ ಪ್ರೋತ್ಸಾಹಧನವನ್ನು ಬಿಡುಗಡೆ ಮಾಡಬೇಕು. ಹಲವು ವರ್ಷಗಳಿಂದ ಟಿಬಿ, ಟಿಬಿಐ, ಎನ್‌ಸಿಡಿ ಸೇರಿದಂತೆ ವಿವಿಧ ಕಂರ್ಪೋರೆಟ್‌ಗಳ ಹಣ ಬಾಕಿ ಉಳಿದಿದ್ದು, ಬಿಡುಗಡೆ ಮಾಡಬೇಕು.
ಅನೇಕ ಆಶಾ ಕಾರ್ಯಕರ್ತೆಯರ ಗೌರವಧನ ಮತ್ತು ಪ್ರೋತ್ಸಾಹಧನವನ್ನು ಹಲವು ತಿಂಗಳುಗಳಿಂದ ಕಡಿತ ಮಾಡಲಾಗಿದ್ದು, ಬಾಕಿ ಇರುವ ಹಣವನ್ನು ತಕ್ಷಣ ಪಾವತಿಸಬೇಕು ಎಂದು ಆಗ್ರಹಿಸಿದರು.
ನಿವೃತ್ತಿಯಾದ ಆಶಾ ಕಾರ್ಯಕರ್ತೆಯರಿಗೆ ಇಡಿಗಂಟು ನೀಡಬೇಕು ಹಾಗೂ ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರಿಸಬೇಕು. ಜನವರಿ 2025ರಲ್ಲಿ ಮುಖ್ಯಮಂತ್ರಿ ಘೋಷಿಸಿದಂತೆ ಕೇಂದ್ರ ಸರ್ಕಾರದ ಪ್ರೋತ್ಸಾಹಧನ ಮತ್ತು ರಾಜ್ಯ ಸರ್ಕಾರದ ಗೌರವಧನವನ್ನು ಸೇರಿಸಿ ಕನಿಷ್ಠ ಮಾಸಿಕ 10,000 ಗೌರವಧನ ನೀಡಲು ಕ್ರಮ ಕೈಗೊಳ್ಳಬೇಕು. 2025ರ ಮಾರ್ಚ್ ಬಜೆಟ್‌ನಲ್ಲಿ ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಿದಂತೆ ಆಶಾ ಕಾರ್ಯಕರ್ತೆಯರಿಗೂ 1,000 ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷೆ ಗೌರಮ್ಮ ಹೊಸಮನಿ, ಕಾರ್ಯದರ್ಶಿ ಶೋಭಾ, ಈರಮ್ಮ ದೇವದುಗಧ, ಪ್ರಭಾವತಿ, ಮಲ್ಲಮ್ಮ, ಲವೀನಾ, ದೇವಮ್ಮ, ಸುಜಾತ, ಭೀಮಮ್ಮ, ಲಕ್ಷ್ಮೀ ರಾಗಿಮಾನಗಡ್ಡ, ಚೈತ್ರಾ, ಕಾರ್ಮಿಕ ಮುಖಂಡರಾದ ಅಣ್ಣಪ್ಪ ಶಿರಶ್ಯಾಡ್, ಮಹೇಶ ಚೀಕಲಪರ್ವಿ, ಎನ್.ಎಸ್.ವೀರೇಶ ಸೇರಿದಂತೆ ಅನೇಕರು ಇದ್ದರು.