ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಮನೆಗಳ ನಿರ್ಮಾಣವನ್ನು ತ್ವರಿತವಾಗಿ ಪೂರ್ಣಗೊಳಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘದ ನೇತೃತ್ವದಲ್ಲಿ ಬುಧವಾರ ರಾಯಚೂರಿನ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಅಹೋರಾತ್ರಿ ಅನಿರ್ದಿಷ್ಟ ಧರಣಿ ಪ್ರತಿಭಟನೆ ನಡೆಸಿದರು. ಜಿಲ್ಲಾಧ್ಯಕ್ಷೆ ಹೆಚ್.ಪದ್ಮಾ, ಗೌರವಾಧ್ಯಕ್ಷ ಕೆ.ಜಿ.ವಿರೇಶ, ಪ್ರಮುಖರಾದ ಮಹಾದೇವಿ, ಜಮಲಮ್ಮ, ಸಂತೋಷಮ್ಮ, ಸರೋಜಮ್ಮ, ತಿಪ್ಪಮ್ಮ, ಜಮಲಮ್ಮ, ನಾಗಮ್ಮ, ನರಸಮ್ಮ, ಬಡೆಮ್ಮ, ಲಾಕಮ್ಮ, ಆನಂದ, ಹುಲಿಗೇಪ್ಪ ಇದ್ದರು.
ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಮನೆಗಳ ನಿರ್ಮಾಣವನ್ನು ತ್ವರಿತವಾಗಿ ಪೂರ್ಣಗೊಳಿಸುವುದು, ಫಲಾನುಭವಿಗಳಿಂದ ವಸೂಲಿ ಮಾಡಲಾಗುತ್ತಿರುವ 1 ಲಕ್ಷ ರೂ.ವಂತಿಗೆ ಹಣವನ್ನು ಕೈಬಿಟ್ಟು ಸರ್ಕಾರವೇ ಉಚಿತವಾಗಿ ಪುನರ್ವಸತಿ ಕಲ್ಪಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘದ ನೇತೃತ್ವದಲ್ಲಿ ಬುಧವಾರ ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಅಹೋರಾತ್ರಿ ಅನಿರ್ದಿಷ್ಟ ಧರಣಿ ಪ್ರತಿಭಟನೆ ನಡೆಸಿದರು.
ದೇವದಾಸಿ ಪದ್ಧತಿ ಕೇವಲ ಒಂದು ಸಾಮಾಜಿಕ ಪಿಡುಗು ಮಾತ್ರವಲ್ಲ, ಮಹಿಳೆಯರ ಮೇಲಿನ ಶೋಷಣೆ ಮತ್ತು ಜಾತಿ ಆಧಾರಿತ ಅಮಾನವೀಯ ದೌರ್ಜನ್ಯದ ವ್ಯವಸ್ಥೆಯಾಗಿದೆ. ದೇವದಾಸಿ ಪದ್ಧತಿ ನಿಷೇಧಗೊಂಡಿದ್ದರೂ, ಅದರ ದುಷ್ಪರಿಣಾಮಗಳನ್ನು ಅನುಭವಿಸುತ್ತಿರುವ ಮಹಿಳೆಯರು ಹಾಗೂ ಅವರ ಕುಟುಂಬಗಳ ಪುನರ್ವಸತಿ ಮತ್ತು ಆರ್ಥಿಕ ಸಬಲೀಕರಣ ಸರ್ಕಾರದ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಒತ್ತಾಯಿಸಿದರು. ದೇವದಾಸಿ ಕುಟುಂಬಗಳಲ್ಲಿ ತಾಯಿಯೊಬ್ಬರೇ ಕುಟುಂಬವನ್ನು ನಿರ್ವಹಿಸುವ ಪರಿಸ್ಥಿತಿ ಇದೆ. ದೇವರ ಹೆಸರಿನಲ್ಲಿ ಮಹಿಳೆಯರ ಶೋಷಣೆ ನಡೆದರೂ, ಮಕ್ಕಳ ಜವಾಬ್ದಾರಿಯನ್ನು ಹೊರುವ ವ್ಯವಸ್ಥೆಯೇ ಇಲ್ಲ. ಇದರಿಂದ ಈ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಭವಿಷ್ಯ ಹದಗೆಡುತ್ತಿದೆ ಎಂದು ಆರೋಪಿಸಿದರು.
ಸಂಘದ ನಿರಂತರ ಹೋರಾಟದ ಫಲವಾಗಿ ನಗರದ ಆಶಾಪುರ ರಸ್ತೆಯ ಕೇಂದ್ರಿಯ ವಿದ್ಯಾಲಯದ ಹಿಂಭಾಗದಲ್ಲಿರುವ ಸರ್ವೆ ನಂ.1403ರಲ್ಲಿ 206 ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿಗಾಗಿ 5 ಎಕರೆ ಜಮೀನು ಮಂಜೂರಾಗಿತ್ತು. 2019ರಲ್ಲಿ ಮನೆಗಳ ನಿರ್ಮಾಣ ಕಾರ್ಯ ಆರಂಭವಾದರೂ, ಏಳು ವರ್ಷಗಳಾದರೂ ಕೇವಲ 84 ಮನೆಗಳು ಮಾತ್ರ ಅಂತಿಮ ಹಂತ ತಲುಪಿದ್ದು, ಉಳಿದ 122 ಮನೆಗಳ ಕಾಮಗಾರಿ ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಮನೆಗಳ ನಿರ್ಮಾಣ ವಿಳಂಬದಿಂದ ಅನೇಕ ಕುಟುಂಬಗಳು ಸಂಕಷ್ಟದಲ್ಲಿ ಬದುಕುತ್ತಿದ್ದು, ಕೆಲವು ಫಲಾನುಭವಿಗಳು ಮನೆ ಸಿಗುವ ಮುನ್ನವೇ ಮೃತಪಟ್ಟಿರುವುದು ವಿಷಾದನೀಯ ಎಂದು ಅವರು ಹೇಳಿದರು.
ಫಲಾನುಭವಿಗಳಿಂದ ವಸೂಲಿ ಮಾಡಲಾಗುತ್ತಿರುವ 1 ಲಕ್ಷ ವಂತಿಗೆ ಹಣವನ್ನು ರದ್ದುಪಡಿಸಿ ಸರ್ಕಾರವೇ ಉಚಿತ ಪುನರ್ವಸತಿ ಕಲ್ಪಿಸಬೇಕು. ಸರ್ವೆ ನಂ.1403ರಲ್ಲಿ ನಡೆಯುತ್ತಿರುವ ಮನೆಗಳ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಎಲ್ಲ ಫಲಾನುಭವಿಗಳಿಗೆ ಮನೆಗಳನ್ನು ಹಂಚಿಕೆ ಮಾಡಬೇಕು. ದೇವದಾಸಿ ಮಹಿಳೆಯರ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಜಾರಿಗೊಳಿ ಸಬೇಕು.ಮಾಜಿ ದೇವದಾಸಿ ಮಹಿಳೆಯರಿಗೆ ನೀಡಲಾಗುತ್ತಿರುವ ಮಾಸಿಕ ಸಹಾಯಧನವನ್ನು 2,000ರಿಂದ 6,000ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷೆ ಹೆಚ್.ಪದ್ಮಾ, ಗೌರವಾಧ್ಯಕ್ಷ ಕೆ.ಜಿ.ವಿರೇಶ, ಪ್ರಮುಖರಾದ ಮಹಾದೇವಿ, ಜಮಲಮ್ಮ, ಸಂತೋಷಮ್ಮ, ಸರೋಜಮ್ಮ, ತಿಪ್ಪಮ್ಮ, ಜಮಲಮ್ಮ, ನಾಗಮ್ಮ, ನರಸಮ್ಮ, ಬಡೆಮ್ಮ, ಲಾಕಮ್ಮ, ಆನಂದ, ಹುಲಿಗೇಪ್ಪ, ರವಿ, ಬಸಂತಿ, ಭೀಮೇಶ ಸೇರಿದಂತೆ ನೇಕರು ಇದ್ದರು.