ಲಿಂಗಸುಗೂರು ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ ಅವರಿಗೆ ಜಯ ಕರ್ನಾಟಕ ಕಾರ್ಯಕರ್ತರು ಮನವಿಪತ್ರ ಸಲ್ಲಿಸಿದರು. ಜಯ ಕರ್ನಾಟಕ ತಾಲೂಕು ಅಧ್ಯಕ್ಷ ಬಾಲನಗೌಡ ಮಾಲೀ ಪಾಟೀಲ, ಗೌರವಾಧ್ಯಕ್ಷ ಶ್ರೀಮಂತ ದೇಗುಲಮಡಿ, ಚಾಂದಪಾಶಾ ಇದ್ದಾರೆ.
ಯಲಗಲದಿನ್ನಿ ಶಿವಾರದ ಜಮೀನನ್ನು ಭೂಪರಿವರ್ತನೆಗಾಗಿ ತಯಾರಿಸಲಾಗಿರುವ ಕರಡು ಪ್ರತಿಯನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ ಅವರಿಗೆ ಶನಿವಾರ ಮನವಿ ಪತ್ರ ಸಲ್ಲಿಸಿದರು.
ಅತಿ ಹೆಚ್ಚು ವೋಲ್ಟೇಜ್ ವಿದ್ಯುತ್ ಪ್ರಸರಣ ಮಾಡುವ 220 ಕೆವಿ ಹೈಟೆನ್‌ಷನ್ ವಿದ್ಯುತ್ ಮಾರ್ಗದ ಕೆಳಗಡೆ ಬರುವ ಸರ್ವೇ ಸಂಖ್ಯೆ 65/2, 65/3 ಹಾಗೂ 65/5 ರ ಜಮೀನಿನಲ್ಲಿ ಭೂ ಪರಿವರ್ತನೆ ಮಾಡಲು ಮುಂದಾಗಿದ್ದಾರೆ.
ವಿದ್ಯುತ್ ಇಲಾಖೆಯಿಂದ ನಿರಪೇಕ್ಷಣಾ ಪ್ರಮಾಣ ಪತ್ರವನ್ನು ಪಡೆದಿಲ್ಲ. ಭೂಪರಿವರ್ತನೆಯ ಜಮೀನಿನಲ್ಲಿ ಉದ್ಯಾನವನ, ನಾಗರಿಕ ಸೌಲಭ್ಯ ಹಾಗೂ ರಸ್ತೆಯು ಬಫರ್ ಜೋನ್ ವ್ಯಾಪ್ತಿಯಲ್ಲಿ ಬರುವುದರಿಂದ ಸಾರ್ವಜನಿಕರಿಗೆ ಹೈಟೆನ್‌ಷನ್ ಮಾರ್ಗದಿಂದ ತೊಂದರೆಯಾಗುತ್ತದೆ ಮತ್ತು ಅಪಾಯಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ. ಈ ಕುರಿತು ಏ.17ರಂದು ನಗರ ಯೋಜನಾ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಬಫರ್ ಜೋನ್ ವಲಯದ ಹದ್ದುಬಸ್ತು ಸಂಪೂರ್ಣವಾಗುವವರೆಗೂ ಯಾವುದೇ ಖಾತಾ ನಕಲು ನೀಡಬಾರದು. ಈ ಬಗ್ಗೆ ಮನವಿಗೆ ಸ್ಪಂದಿಸದೆ ಇದ್ದರೆ ಇಲಾಖೆಯ ಮೇಔಧಿಕಾರಿಗಳಿಂದ ತನಿಖೆಗೆ ಒಳಪಡಿಸಲಾಗುವುದು ಎಂದು ಮನವಿ ಪತ್ರದಲ್ಲಿ ಎಚ್ಚರಿಸಲಾಯಿತು.