ಲಿಂಗಸುಗೂರು ತಾಪಂ ಆವರಣದಲ್ಲಿ ಗಂಗಾ ಕಲ್ಯಾಣ ಯೋಜನೆಯ ಉಪಕರಣಗಳನ್ನು ಶಾಸಕ ಮಾನಪ್ಪ ವಜ್ಜಲ್ ಫಲಾನುಭವಿಗಳಿಗೆ ವಿತರಿಸಿದರು. ಡಿ.ದೇವರಾಜು ಅರಸು ನಿಗಮದ ಜಿಲ್ಲಾ ವ್ಯವಸ್ಥಾಪಕ ಮಂಜುನಾಥ, ಮಹರ್ಷಿ ವಾಲ್ಮೀಕಿ ನಿಗಮದ ಅಧಿಕಾರಿ ಆದೇಶ, ತಾಪಂ ಎಡಿ ಪಂಪನಗೌಡ, ಕಾರ್ಮಿಕ ಇಲಾಖೆ ಅಧಿಕಾರಿ ಶಾಂತಮೂರ್ತಿ ಇತರರಿದ್ದರು.
ಲಿಂಗಸುಗೂರು: ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ತಲುಪಿಸಲು ಅಧಿಕಾರಿಗಳು ವಿಳಂಬ ಮಾಡಬಾರದು ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.
ಪಟ್ಟಣದ ತಾಪಂ ಆವರಣದಲ್ಲಿ ಸೋಮವಾರ ವಿವಿಧ ಇಲಾಖೆಗಳ ಉಪಕರಣಗಳನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದರು. ಡಿ.ದೇವರಾಜ ಅರಸು ನಿಗಮ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಕಾರ್ಮಿಕ ಇಲಾಖೆ ಒದಗಿಸಿರುವ ಸೌಲಭ್ಯಗಳನ್ನು ಬಡವರು, ರೈತರು, ಮಹಿಳೆಯರು, ಕಾರ್ಮಿಕರು ಪಡೆದುಕೊಂಡು ಸ್ವಾವಲಂಬಿ ಜೀವನ ನಡೆಸಬೇಕು ಎಂದರು.
ಡಿ.ದೇವರಾಜು ಅರಸು ನಿಗಮದಿಂದ 22 ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳು, ಕಾರ್ಮಿಕ ಇಲಾಖೆಯಿಂದ 300 ಕಟ್ಟಡ ಕಾರ್ಮಿಕರಿಗೆ ಸುರಕ್ಷತಾ ಕಿಟ್ ವಿತರಿಸಲಾಯಿತು. ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ 2018-19 ರಿಂದ 2022-23 ರವರೆಗೆ ಆಯ್ಕೆಯಾದ 26 ಫಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯ ಆಯ್ಕೆ ಆದೇಶ ಪತ್ರಗಳನ್ನು ಶಾಸಕ ಮಾನಪ್ಪ ವಜ್ಜಲ್ ನೀಡಿದರು.
ಡಿ.ದೇವರಾಜು ಅರಸು ನಿಗಮದ ಜಿಲ್ಲಾ ವ್ಯವಸ್ಥಾಪಕ ಮಂಜುನಾಥ, ಮಹರ್ಷಿ ವಾಲ್ಮೀಕಿ ನಿಗಮದ ಅಧಿಕಾರಿ ಆದೇಶ, ತಾಪಂ ಸಹಾಯಕ ನಿರ್ದೇಶಕ ಪಂಪನಗೌಡ, ಕಾರ್ಮಿಕ ಇಲಾಖೆಯ ಅಧಿಕಾರಿ ಶಾಂತಮೂರ್ತಿ, ಬಿಜೆಪಿ ಮುಖಂಡರಾದ ಗಿರಿಮಲ್ಲನಗೌಡ ಪಾಟೀಲ್, ವೆಂಕನಗೌಡ ಐದನಾಳ, ಪರಶುರಾಮ ಕೆಂಭಾವಿ, ನಿಂಗಪ್ಪ ದೇವಿಕೇರಿ ಇತರರಿದ್ದರು.