ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ಡಿಸಿ ಭೇಟಿ: ಪರಿಶೀಲನೆ
ರಾಯಚೂರಿನ ಹೊರ ವಲಯದ ಯರಮರಸ್ ಬಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣದ ಕಾಮಗಾರಿ ಸ್ಥಳಕ್ಕೆ ಜಿಲ್ಲಾಧಿಕಾರಿ ಪೂವಿತಾ ಎಸ್. ಬುಧವಾರ ಸಂಜೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ವೆಂಕಟೇಶ ಗಲಗ, ಸಹಾಯಕ ಅಭಿಯಂತರ ಮಹೇಶ್, ಗುತ್ತಿಗೆದಾರ ಕಂಪನಿ ಕೆಎಂವಿದ ಪ್ರತಿನಿಧಿ ಪ್ರವೀಣ್ ಇದ್ದರು.
ನಗರದ ಹೊರ ವಲಯದ ಯರಮರಸ್ ಬಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣದ ಕಾಮಗಾರಿ ಸ್ಥಳಕ್ಕೆ ಜಿಲ್ಲಾಧಿಕಾರಿ ಪೂವಿತಾ ಎಸ್. ಬುಧವಾರ ಸಂಜೆ ಭೇಟಿ ನೀಡಿ ಕಾಮಗಾರಿ ಪ್ರಗತಿಯ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿದರು.
ಮೊದಲಿಗೆ ವಿಮಾನ ನಿಲ್ದಾಣದ ರನ್ ವೇ ಕಾಮಗಾರಿಯ ವೀಕ್ಷಣೆ ನಡೆಸಿ ಕಾಮಗಾರಿಯ ಪ್ರಗತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಒಟ್ಟು 1.7 ಕಿ ಮೀ ಉದ್ದದ ರನ್ ವೇ ಪೈಕಿ ಇದುವರೆಗೆ 850 ಮೀಟರ್‌ನಷ್ಟು ರನ್‌ವೆಗೆ ಮರಂ ಹಾಕಿದ್ದು, ಬಾಕಿ ಕಾಮಗಾರಿ ಪ್ರಗತಿ ಹಂತದಲ್ಲಿದೆಂದು ಅಧಿಕಾರಿಗಳು ಮಾಹಿತಿ ನೀಡಿದರು.
ಬಳಿಕ ಪ್ಯಾಸೆಂಜರ್ ಟರ್ಮಿನಲ್ ಬಿಲ್ಡಿಂಗ್‌ಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಕಟ್ಟಡಕ್ಕೆ ಈಗಾಗಲೇ ಕಾಲಂ ಮತ್ತು ಚೆತ್ ಹಾಕಿದ್ದು, ಈಗ ರೂಪ್ ಟ್ರಸ್ ಕಾಮಗಾರಿ ಕೈಗೊಳ್ಳಲಾಗುತ್ತಿದೆ ತಿಳಿಸಿದರು.
ಒಟ್ಟು 12 ಸೆಕ್ಯುರಿಟಿ ವಾಚ್ ಟವರ್ ಪೈಕಿ ಇದೀಗ 8 ಟವರ್‌ಗಳ ನಿರ್ಮಾಣ ಕಾರ್ಯವು ಪ್ರಗತಿಯಲ್ಲಿದೆ. ವಿಮಾನ ನಿಲ್ದಾಣದ ಕಾಂಪೌಂಡ್ ಒಳಭಾಗದಲ್ಲಿನ ಆಂತರಿಕ ರಸ್ತೆಗಳ ನಿರ್ಮಾಣ ಕಾಮಗಾರಿಯು ಸಹ ಪ್ರಗತಿಯಲ್ಲಿದೆ. ವಿಮಾನ ನಿಲ್ದಾಣದ ಒಟ್ಟು 8 ಕಿ.ಮೀಟರ್ ಕಾಂಪೌಂಡ್ ನಿರ್ಮಾಣ ಕಾರ್ಯವು ಈಗಾಗಲೇ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಮತ್ತು ಗುತ್ತಿಗೆದಾರರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ವಿಮಾನ ನಿಲ್ದಾಣ ಕಾಮಗಾರಿಯನ್ನು ವೇಗಗೊಳಿಸಿ, ಬಾಕಿ ಉಳಿಸಿದ ಎಲ್ಲ ಕಾರ್ಯಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕೆಂದು ಸಂಬಂಧಿಸಿದ ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಲೇಔಟ್ ಕಾಮಗಾರಿಗಳ ವೀಕ್ಷಣೆ: ರಾಯಚೂರು ಹೊರ ವಲಯದ ದಂಡ್‌ಗ್ರಾಮದ 108 ಹಾಗೂ ಏಗನೂರು ಗ್ರಾಮದ 30 ಮನೆಗಳ ಹಸ್ತಾಂತರ ಹಿನ್ನಲೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಲೇಔಟ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ವೆಂಕಟೇಶ ಗಲಗ, ಸಹಾಯಕ ಅಭಿಯಂತರ ಮಹೇಶ್, ಗುತ್ತಿಗೆದಾರ ಕಂಪನಿ ಕೆಎಂವಿದ ಪ್ರತಿನಿಧಿ ಪ್ರವೀಣ್ ಸೇರಿ ಅನೇಕರು ಇದ್ದರು.