ಲಿಂಗಸುಗೂರು ಸಹಾಯಕ ಆಯುಕ್ತ ಕಚೇರಿ ಆವರಣದಲ್ಲಿ ಬೀದಿಬದಿ ವ್ಯಾಪಾರಸ್ಥರು ಅಹೋರಾತ್ರಿ ಧರಣಿ ನಡೆಸಿದರು. ಕರ್ನಾಟಕ ಪ್ರದೇಶ ಬೀದಿಬದಿ ವ್ಯಾಪಾರಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಯೇಸುಮಿತ್ರ, ತಾಲೂಕು ಅಧ್ಯಕ್ಷ ಮಹಿಬೂಬ ಪಾಷಾ, ಕಂಪ್ಯೂಟರ್ ಅಂಗಡಿಗಳ ಸಂಘದ ಅಧ್ಯಕ್ಷ ಅಮರಯ್ಯ ಘಂಟಿ, ರೈತ ಸಂಘದ ತಾಲೂಕು ಅಧ್ಯಕ್ಷ ಪ್ರಸಾದ ರೆಡ್ಡಿ ಇತರರಿದ್ದರು.
ಲಿಂಗಸುಗೂರು: ಪಟ್ಟಣದಲ್ಲಿ ಬೀದಿಬದಿ ವ್ಯಾಪಾರಿ ಅಂಗಡಿಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿದ್ದು, ಪುರಸಭೆಯಿಂದ ಅಂಗಡಿಗಳನ್ನು ತೆರವುಗೊಳಿಸಲು ಮುಂದಾಗಿರುವುದನ್ನು ಖಂಡಿಸಿ ಬೀದಿಬದಿ ವ್ಯಾಪಾರಿಗಳ ಒಕ್ಕೂಟದಿಂದ ವ್ಯಾಪಾರಸ್ಥರು ಸೋಮವಾರ ಸಹಾಯಕ ಆಯುಕ್ತರ ಕಚೇರಿ ಆವರಣದಲ್ಲಿ ಅಹೋರಾತ್ರಿ ಧರಣಿ ನಡೆಸಿದರು.
ಹಲವು ವರ್ಷಗಳಿಂದ ಬೀದಿಬದಿ ವ್ಯಾಪಾರ ಮಾಡುತ್ತಾ ಬರಲಾಗಿದೆ. ವ್ಯಾಪಾರ ಮಾಡುವವರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಪರ್ಯಾಯ ವ್ಯವಸ್ಥೆ ಕಲ್ಪಿಸದೆ ತೆರವು ಕಾರ್ಯಾಚರಣೆ ಮಾಡಲು ಮುಂದಾಗಿರುವುದು ಸರಿಯಲ್ಲ.
ಕೆಎಂಸಿ ಕಾಯ್ದೆ ಪ್ರಕಾರ ವ್ಯಾಪಾರಸ್ಥರ ಸಭೆ ಕರೆಯುವ ಕೆಲಸ ಮಾಡಿಲ್ಲ. ಅಲ್ಲದೆ ಪಿಎಂ ಸ್ವನಿಧಿ ಯೋಜನೆಯಡಿಯಲ್ಲಿ ಸಾಲವನ್ನು ಪಡೆದುಕೊಂಡು ವ್ಯಾಪಾರ ಮಾಡುತ್ತಾ ಬಂದಿದ್ದೇವೆ. ಕುಟುಂಬದ ನಿರ್ವಹಣೆಗೆ ಬೀದಿಬದಿ ವ್ಯಾಪಾರ ಮಾಡುತ್ತಾ ಬಂದಿದ್ದೇವೆ. ಕೂಡಲೇ ತೆರವುಗೊಳಿಸುವುದನ್ನು ತಡೆದು ವ್ಯಾಪಾರ ವಹಿವಾಟು ನಡೆಸಲು ಅನುಕೂಲ ಮಾಡಿಕೊಡುವವರೆಗೆ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದರು.