

ರಾಯಚೂರು
ಉತ್ತರ ಕರ್ನಾಟಕ ಭಾಗದ ಜನರ ಗಟ್ಟಿ ಆಹಾರ ಎಂದೇ ಹೆಸರು ಪಡೆದಿರುವ ಬಿಳಿ ಜೋಳದ ಬಿತ್ತನೆ ಕಡಿಮೆ ನಡುವೆ ಜಿಲ್ಲೆಯಲ್ಲಿ ಬಿಳಿ ಜೋಳದ ರಾಶಿ ಪ್ರಾರಂಭವಾಗಿದೆ.
ರಾಯಚೂರಿನ ಬಿಳಿ ಜೋಳವು ಪಕ್ಕದ ಜಿಲ್ಲೆ ಸೇರಿದಂತೆ ನೆರೆ ರಾಜ್ಯಗಳಲ್ಲಿಯೂ ಹೆಸರುವಾಸಿಯಾಗಿದ್ದು, ಆದರೆ ಬಿತ್ತನೆ ಕಡಿಮೆಯಾಗಿದ್ದರಿಂದ ಮಾರುಕಟ್ಟೆಯಲ್ಲಿ ಬಂಪರ್ ಬೆಲೆ ನಿಗದಿಯಾಗಿದೆ. ಈ ಮೊದಲು ಹೆಚ್ಚಿನ ಪ್ರಮಾಣದಲ್ಲಿ ಜೋಳ ಬೆಳೆಯುತ್ತಿದ್ದ ರೈತರು ಕಾಲ ಬದಲಾದಂತೆ ಹತ್ತಿ ಬೆಳೆಯಲು ಮುಂದಾಗಿದ್ದರು. ತುಂಗಭದ್ರಾ ಜಲಶಯದಿಂದ ಈ ಬಾರಿ ಬೇಸಿಗೆಯಲ್ಲಿ ಎರಡನೇ ಬೆಳೆಗೆ ನೀರು ದೊರೆಯದಿರುವುದರಿಂದ ಕಡಿಮೆ ಪ್ರದೇಶದಲ್ಲಿ ಜೋಳ ಬೆಳೆದು ಇದೀಗ ರಾಶಿ ಮಾಡಲು ಮುಂದಾಗಿದ್ದಾರೆ.
ಜಿಲ್ಲೆಯಲ್ಲಿ ಬಿತ್ತನೆ ಪ್ರಮಾಣ
2024- 2025ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಕೇವಲ 7163 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಮುಂಗಾರಿನಲ್ಲಿ 7100 ಹೆಕ್ಟರ್ ಪ್ರದೇಶದಲ್ಲಿ ಕೃಷಿ ಇಲಾಖೆಯಿಂದ ಬಿತ್ತನೆ ಗುರಿಯ ಪೈಕಿ 6483 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಈ ಪೈಕಿ ರಾಯಚೂರು 600 ಹೆಕ್ಟರ್,ಮಾನ್ವಿ 963 ಹೆಕ್ಟರ್,ಸಿರವಾರ,ದೇವದುರ್ಗದಲ್ಲಿ ತಲಾ 600 ಹೆಕ್ಟರ್, ಲಿಂಗಸುಗೂರಿನಲ್ಲಿ 1300 ಹೆಕ್ಟರ್, ಮಸ್ಕಿಯಲ್ಲಿ 700 ಹೆಕ್ಟರ್ ಹಾಗೂ ಸಿಂಧನೂರಿನಲ್ಲಿ 1700 ಹೆಕ್ಟರ್ ಈ ಬಾರಿ ಜೋಳ ಬೆಳೆಯಲಾಗಿದೆ. ಜತೆಗೆ 2026 ಸಾಲಿನ ಹಿಂಗಾರು ಬಿತ್ತನೆ ಪ್ರಮಾಣವನ್ನು ಕೃಷಿ ಇಲಾಖೆ ಇನ್ನೂ ಘೋಷಣೆ ಮಾಡಿಲ್ಲ.
ಬಿತ್ತನೆ ಇಳಿಕೆ ಕಾರಣ
ಜೋಳಕ್ಕಿಂತ ತೊಗರಿ ಕೊಯ್ಲು ಹಾಗೂ ರಾಶಿ ಮಾಡುವುದು ಸುಲಭ. ಹೀಗಾಗಿ ಮುಂಗಾರು ಹಂಗಾಮಿನಲ್ಲಿ ನಿಗದಿತ ಗುರಿಗಿಂತ ಅಧಿಕ ತೊಗರಿ ಬಿತ್ತನೆ ಆಗಿತ್ತು. ಅತಿವೃಷ್ಟಿಯಿಂದ ತೊಗರಿ ಬೆಳೆ ಹಿಂಗಾರು ಹಂಗಾಮು ಪ್ರಾರಂಭದ ದಿನಗಳಲ್ಲಿ ಹಾಳಾದ ಹಿನ್ನೆಲೆಯಲ್ಲಿ ಬಿಳಿಜೋಳ ಹಾಗೂ ಕಡಲೆ ಬಿತ್ತನೆಯತ್ತ ರೈತರು ಮುಖ ಮಾಡಿದರು. ಹೀಗಾಗಿ ಹಿಂಗಾರು ಹಂಗಾಮಿನಲ್ಲಿ ಕಡಲೆ ಬಿತ್ತನೆಗೇ ರೈತರು ಆದ್ಯತೆ ನೀಡಿದ್ದಾರೆ. ಇದರ ಪರಿಣಾಮವಾಗಿ ಬಿಳಿಜೋಳದ ಬಿತ್ತನೆ ಪ್ರದೇಶ ಕಡಿಮೆಯಾಗುತ್ತಿದೆಂದು ರೈತರು ಹೇಳುತ್ತಿದ್ದು, ಈ ಹಂಗಾಮಿನ ಬಿಳಿ ಜೋಳದ ಅವಧಿ ನಾಲ್ಕು ತಿಂಗಳಾದರೆ, ಕಡಲೆ ಮೂರು ತಿಂಗಳ ಅವಧಿಯದ್ದು. ಜೋಳದ ಕೃಷಿಗೆ ಅತ್ಯಾಧುನಿಕ ಯಂತ್ರೋಪಕರಣ ಇಂದಿಗೂ ಲಭ್ಯವಿಲ್ಲ. ಕೊಯ್ಲಿಗೆ ಕೂಲಿ ಕಾರ್ಮಿಕರನ್ನೇ ಅವಲಂಬಿಸಬೇಕು. ರಾಶಿ ಮಾಡಲೂ ಸಮರ್ಪಕ ಯಂತ್ರವಿಲ್ಲ. ಅಕಾಲಿಕ ಮಳೆ ಸುರಿದರೆ ಬಿಳಿ ಜೋಳ ಕಪ್ಪಾಗಿ ಉಪಯೋಗಕ್ಕೆ ಬಾರದಂತಾಗುತ್ತದೆ. ಸಕಾಲಕ್ಕೆ ಕೃಷಿ ಕಾರ್ಮಿಕರು ಸಿಗದಿದ್ದರೆ ಮಣ್ಣು ಪಾಲಾಗುವ ಸಾಧ್ಯತೆ ಹೆಚ್ಚು. ಆದರೆ, ಕಡಲೆ ಬೆಳೆಯಲ್ಲಿ ಅತ್ಯಾಧುನಿಕ ಯಂತ್ರೋಪಕರಣ ಬಳಸಿ ಒಂದೇ ಸಲಕ್ಕೆ ಕೊಯ್ಲುರಾಶಿ ಮಾಡಲು ಅನುಕೂಲವಾಗುತ್ತದೆ.
ಬಂಪರ್ ಬೆಲೆಗೆ ಮಾರಾಟ
ಜಿಲ್ಲೆಯಲ್ಲಿ ಬಿಳಿ ಜೋಳದ ಬಿತ್ತನೆ ಕಡಿಮೆಯಾಗಿದ್ದರಿಂದ ಎಪಿಎಂಸಿಯಲ್ಲಿ ಜೋಳಕ್ಕೆ ಬಂಪರ್ ಬೆಲೆ ನಿಗದಿಯಾಗಿದ್ದು, ಕ್ವಿಂಟಲ್ ಬಿಳಿ ಜೋಳಕ್ಕೆ ಕ್ವಿಂಟಲ್‌ಗೆ 4000 ರಿಂದ 5000 ವರೆಗೆ ಮಾರಾಟವಾಗುತ್ತಿದೆ. ಜತೆಗೆ ಹೈ. ಜೋಳಕ್ಕೆ 3500 ರೂ. ವರಗೆ ಮಾರಾಟವಾಗುತ್ತಿದೆ.ಮಾರುಕಟ್ಟೆಯಲ್ಲಿ ಎರಡು ದಿನಕೊಮ್ಮೆ 61.74 ಕ್ವಿಂಟಲ್ ಆವಕವಾಗುತ್ತಿದೆ. ಇದರ ಜತೆಗೆ ಬಿಳಿಜೋಳದ ದರಕ್ಕೆ ಜನ ತತ್ತರಿಸಿದ್ದು, ಈ ಬಾರಿ ಜೋಳ ಬೆಳೆದ ರೈತರಲ್ಲಿ ಸಂಭ್ರಮ ಮನೆ ಮಾಡಿದೆ.
ಪ್ರಕಾಶ ಚೌಹಣ್ ಜಂಟಿ ನಿರ್ದೇಶಕರು ಕೃಷಿ ಇಲಾಖೆ ರಾಯಚೂರು