ದೇವದುರ್ಗ: ಕುಡಿವ ನೀರು ಪ್ರತಿಯೊಂದು ಜೀವ ಸಂಕುಲಕ್ಕೂ ಅಮೃತ ಇದ್ದಂತೆ. ಇದರಿಂದಾಗಿ ಪ್ರತಿಯೊಬ್ಬರೂ ನೀರಿನ ಸಂರಕ್ಷಣೆಗೆ ಮುಂದಾಗಬೇಕು ಎಂದು ತಾಪಂ ಇಒ ಕೆ.ರಾಜೇಂದ್ರಕುಮಾರ ಹೇಳಿದರು.
ಜೇರಬಂಡಿ ಗ್ರಾಪಂ ವ್ಯಾಪ್ತಿಯ ಕಮದಾಳ ಗ್ರಾಮದಲ್ಲಿ ನಿರಂತರ ಕುಡಿವ ನೀರಿನ ಯೋಜನೆ ಕಾಮಗಾರಿ ಉದ್ಘಾಟನೆ ಹಾಗೂ ನಿರಂತರ ಕುಡಿವ ನೀರು ಸರಬರಾಜು ಗ್ರಾಮ ಘೋಷಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದರು. ಗ್ರಾಮದಲ್ಲಿ ಇನ್ನು ಮುಂದೆ ಪ್ರತಿ ಮನೆಗೆ ನಿರಂತರ ಕುಡಿವ ನೀರು ಪೂರೈಕೆ ಮಾಡಲಾಗುವುದು. ಈ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸುವ ಜವಾಬ್ದಾರಿ ಗ್ರಾಪಂ ಹಾಗೂ ಗ್ರಾಮಸ್ಥರ ಮೇಲಿದೆ ಎಂದರು.
ಪ್ರತಿಯೊಬ್ಬರೂ ನೀರಿನ ಮೌಲ್ಯ ಅರಿತು ಅದರ ಸಂರಕ್ಷಣೆ ಮಾಡಬೇಕು. ನೀರು ಮಿತವಾಗಿ ಬಳಕೆ ಮಾಡುವುದರೊಂದಿಗೆ ಪೋಲಾಗದಂತೆ ಎಚ್ಚರಿಕೆ ವಹಿಸಬೇಕು. ತಾಲೂಕಿನಲ್ಲಿ ಕಮದಾಳ ನಿರಂತರ ಕುಡಿವ ನೀರು ಪೂರೈಕೆಯಾಗುತ್ತಿರುವ ಮೊದಲ ಗ್ರಾಮವಾಗಿದೆ. ಇದರಿಂದಾಗಿ ನಿರಂತರ ಕುಡಿವ ನೀರು ಪೂರೈಕೆ ವ್ಯವಸ್ಥೆ ಯಶಸ್ವಿಯಾಗಿ ನಿರ್ವಹಿಸಲು ಸಹಕರಿಸಬೇಕು ಎಂದು ಹೇಳಿದರು.
ಜೆಜೆಎಂ ಯೋಜನೆ ರಾಜ್ಯ ಸಂಯೋಜಕ ನಂದಕುಮಾರ್ ತಂದಾಳೆ ಮಾತನಾಡಿ, ಗ್ರಾಮಸ್ಥರು ನೀರನ್ನು ಮಿತವಾಗಿ ಬಳಸಬೇಕು. ನೀರು ಸೋರಿಕೆ ಕಂಡುಬಂದಲ್ಲಿ ಗ್ರಾಪಂ ಸಿಬ್ಬಂದಿಗೆ ಮಾಹಿತಿ ನೀಡಬೇಕು. ಪೈಪ್‌ಲೈನ್ ದುರಸ್ತಿ ಸೇರಿದಂತೆ ಯಾವುದೇ ಸಮಸ್ಯೆ ಕಂಡುಬಂದರೂ ನೀರುಗಂಟಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಜಿಪಂ ಎಇಇ ಕೆ.ಹೀರಾಲಾಲ್, ಪಿಡಿಒ ರಾಮಣ್ಣ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಅಧಿಕಾರಿ ಮಧು, ಅಂಗನವಾಡಿ ಮೇಲ್ವಿಚಾರಕಿ ಶರಣಮ್ಮ, ರಮೇಶ್ ಕುಮಾರ್, ರವಿಕುಮಾರ್, ಅರ್ಚನಾ ಇತರರಿದ್ದರು.