ರೈತರಿಗೆ ಪರಿಹಾರ ಒದಗಿಸಲು ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ

ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಜಯ್ ಧರ್ಮಸಿಂಗ್
ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಜಯ್ ಧರ್ಮಸಿಂಗ್
Published on

ರಾಜ್ಯ ಸರ್ಕಾರವು ರೈತರ ಪರವಾಗಿದೆ. ಅವರಿಗೆ ಅನುಕೂಲವಾಗುವ ಕೆಲಸ ಕಾರ್ಯಗಳನ್ನು ಮಾಡುವ ಜತೆಗೆ ಅಗತ್ಯವಿರುವ ಎಲ್ಲಾ ನೆರವು ಮತ್ತು ಪರಿಹಾರಗಳನ್ನು ಒದಗಿಸಲು ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತದೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಜಯ್ ಧರ್ಮಸಿಂಗ್ ತಿಳಿಸಿದರು.

ನಗರದ ಜಿಲ್ಲಾ ಕ್ರೀಡಾಂಗನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರ ಪರ ಸಭೆಗಳನ್ನು ನಡೆಸುವುದಷ್ಟೇ ಅಲ್ಲದೆ ಕಳೆದ 8 ದಿನಗಳ ಹಿಂದೆ ಜಿಲ್ಲೆಯ ಪ್ರತಿಯೊಂದು ತಾಲೂಕಿಗೂ ಖುದ್ದಾಗಿ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಪರಿಶೀಲಿಸಲಾಗಿದೆ. ರೈತರು ಎದುರಿಸುತ್ತಿರುವ ಸಮಸ್ಯೆಗಳು, ಕಷ್ಟಗಳು ಮತ್ತು ಸಂಕಷ್ಟಗಳನ್ನು ಹತ್ತಿರದಿಂದ ಆಲಿಸಿ, ವರದಿಯನ್ನು ಸಿದ್ಧಪಡಿಸಲಾಗುತ್ತಿದೆ. ಕೂಡಲೇ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಜಿಲ್ಲೆಯ ಜನರ ಯಾವುದೇ ಸಮಸ್ಯೆಗಳಿದ್ದರೂ ಅದಕ್ಕೆ ಎಲ್ಲರೂ ಸೇರಿ ಸಕಾರಾತ್ಮಕವಾಗಿ ಸ್ಪಂದಿಸುವ ಕೆಲಸವನ್ನು ಮಾಡಲಾಗುತ್ತದೆ. ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡುವ ತೀರ್ಮಾನವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದ್ದಾರೆ. ಡಾ. ನಂಜುಅಡಪ್ಪ ವರದಿ ಹಾಗೂ ಪ್ರೊ. ಗೋವಿಂದರಾವ್ ಸಮಿತಿ ವರದಿಯ ಕಾಂಪ್ರಹೆನ್ಸಿವ್ ಕಾಂಪೊಸಿಟ್ ಡೆವಲಪ್ಮೆಂಟ್ ಇಂಡೆಕ್ಸ್ ಆಧಾರದ ಮೇಲೆಯೇ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಅನುದಾನ ಹಂಚಿಕೆಯಾಗುತ್ತದೆ. ಜಿಲ್ಲೆಯ ವಿಶ್ವವಿದ್ಯಾಲಯಕ್ಕೆ ಅಗತ್ಯ ಅನುದಾನ ನೀಡಲಾಗಿದ್ದು, ಯಾವುದೇ ತಾರತಮ್ಯ ಮಾಡದೆ ರಾಯಚೂರು, ಕಲ್ಯಾಣ ಕರ್ನಾಟಕ ಹಾಗೂ ಇಡೀ ರಾಜ್ಯದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು.
ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಮಹಾತ್ವಕಾಂಕ್ಷಿ ಜಿಲ್ಲೆಗಳೆಂದು ಘೋಷಿಸಲಾಗಿದೆ. ಕೇಂದ್ರ ಸರ್ಕಾರದಿಂದ ಕಳೆದ ಕೆಲ ವರ್ಷಗಳಿಂದ ಸರಿಯಾಗಿ ಅನುದಾನ ಬಂದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ನಿಯೋಗ ಕರೆದೊಯ್ದುದ ನಂತರ ನವದೆಹಲಿಗೂ ತೆರಳಿ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ಡಾ.ನಂಜುಅಡಪ್ಪ ವರದಿಯ ಆಧಾರದ ಮೇಲೆ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಸಿಡಿಐ ಸೂಚ್ಯಂಕದಂತೆ ಅನುದಾನ ಹಂಚಿಕೆ ಮಾಡಲಾಗುತ್ತಿದೆ. ರಾಯಚೂರು ಹಾಗೂ ಕಲಬುರಗಿ ನಗರ ಮಟ್ಟದ ಅಭಿವೃದ್ಧಿಗೆ ಸಂಬಅಧಿಸಿದಂತೆ ಕೆಲವು ತಾಲೂಕುಗಳಿಗೆ ಅನುದಾನ ಹಂಚಿಕೆಯಲ್ಲಿ ವ್ಯತ್ಯಾಸವಾಗಿರುವುದು ಮತ್ತು ಅನ್ಯಾಯವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಪ್ರೊ.ಗೋವಿಂದರಾವ್ ಅವರ ವರದಿಯ ಉಲ್ಲೇಖಗಳನ್ನೂ ಪರಿಶೀಲಿಸಿ, ಗ್ರಾಮೀಣ ಹಾಗೂ ತಾಲೂಕು ಮಟ್ಟದ ಅಸಮತೋಲನವನ್ನು ಸರಿಪಡಿಸಲು ಸರ್ಕಾರಿ ಮಟ್ಟದಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಧ್ಯಂತರ ಬೆಳೆ ಹಾನಿ ನಿಯಮಗಳ ಪ್ರಕಾರ ಫಸಲ ಭೀಮಾ ಯೋಜನೆ ಮೂಲಕ ಶೇ.25 ರಷ್ಟು ಪರಿಹಾರ ಹಣವನ್ನು ಬಿಡುಗಡೆ ಮಾಡಲು ಸರ್ಕಾರದಿಂದ ಅಗತ್ಯ ಕ್ರಮ ವಹಿಸಲಾಗುವುದು. ನಮ್ಮ ಸರ್ಕಾರದ ಅವಧಿಯಲ್ಲಿ ಯಾವುದೇ ಕಾರಣಕ್ಕೂ ಅನಧಿಕೃತ ಒತ್ತುವರಿಗೆ ಅವಕಾಶ ನೀಡುವುದಿಲ್ಲ. ಅಗತ್ಯ ಮಾಹಿತಿ ತರೆಸಿಕೊಂಡು ಸೂಕ್ತ ಹೆಜ್ಜೆ ಇಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಾಸಕ ಬಸನಗೌಡ ದದ್ದಲ್, ಎಂಲ್ಸಿ ಎ.ವಸಂತ ಕುಮಾರ, ಜಿಲ್ಲಾಧಿಕಾರಿ ಪೂವಿತಾ ಎಸ್., ಜಿಪಮ ಸಿಇಓ ಈಶ್ವರ ಕುಮಾರ ಕಾಂದೊ, ಎಸ್ಪಿ ಅರುಣಾಂಗ್ಷು ಗಿರಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net