ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ: ಮುದಗಲ್: ಪಟ್ಟಣದ ಪುರಸಭೆ ಕಚೇರಿಗೆ ಸಂಸದ ಜಿ.ಕುಮಾರನಾಯಕ ಶುಕ್ರವಾರ ಭೇಟಿ ನೀಡಿ, ಕುಡಿವ ನೀರಿನ ಸಮಸ್ಯೆ ಹಾಗೂ ಶಾಶ್ವತ ಕುಡಿವ ನೀರಿನ ಯೋಜನೆ ಕುರಿತು ಮುಖ್ಯಾಧಿಕಾರಿ ಪ್ರವೀಣ ಭೋಗಾರ ಅವರಿಂದ ಮಾಹಿತಿ ಪಡೆದರು. ನಿರಂತರ ಕುಡಿವ ನೀರಿನ ಯೋಜನೆ ಕಾಮಗಾರಿ ನನೆೆಗುದಿಗೆ ಬಿದ್ದಿದ್ದು, ಪಟ್ಟಣದಲ್ಲಿ ಒಂದೇ ಟ್ಯಾಂಕ್‌ನ ಮೂಲಕ 23 ವಾರ್ಡ್‌ಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಇತ್ತೀಚೆಗೆ ಡಿಸಿ ಅವರು 1.20 ಕೋಟಿ ರೂ. ನೀರು ಸಂಗ್ರಹ ಟ್ಯಾಂಕ್ ಕಾಮಗಾರಿಗೆ ಬಿಡುಗಡೆಗೊಳಿಸಿದ್ದು, ತಾಂತ್ರಿಕ ಕಾರಣಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು. ಸಂಸದ ಕುಮಾರನಾಯಕ ಪ್ರತಿಕ್ರಿಯಿಸಿ, ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕುಡಿವ ನೀರಿನ ಕಾಮಗಾರಿ ನಡೆಸಲು ಸೂಚಿಸಲಾಗುವುದು. ಆದಷ್ಟು ಬೇಗ ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು. ಪ್ರಮುಖರಾದ ತಮ್ಮಣ್ಣ ಗುತ್ತೇದಾರ, ಎಸ್.ಆರ್.ರಸೂಲ್, ಗೋವಿಂದ ನಾಯಕ್, ಅರುಣ ಯರದಿಹಾಳ, ರುದ್ರಪ್ಪ ಅಂಗಡಿ ಇದ್ದರು.