ದೇವದುರ್ಗ: ಕೇಂದ್ರ ಸರ್ಕಾರ ಪ್ರತಿ ಮನೆಗೂ ಶುದ್ಧ ಕುಡಿವ ನೀರು ಒದಗಿಸುವ ದೃಷ್ಟಿಯಿಂದ ಪ್ರಧಾನಮಂತ್ರಿ ಜಲಜೀವನ ಮಿಷನ್ ಯೋಜನೆ ಜಾರಿಗೊಳಿಸಿದ್ದು, ಬಾಕಿ ಇರುವ ಜೆಜೆಎಂ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕಿ ಕರೆಮ್ಮ ಜಿ.ನಾಯಕ ಸೂಚಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಕುಡಿವ ನೀರಿನ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಬುಧವಾರ ಮಾತನಾಡಿದರು. ಹಲವು ಕಡೆ ಜೆಜೆಎಂ ಕಾಮಗಾರಿ ಅರೆಬರೆ ಮಾಡಲಾಗಿದೆ. ಈ ಬಗ್ಗೆ ವಿಶೇಷ ಕಾಳಜಿವಹಿಸಿ ಕಾಮಗಾರಿ ಪೂರ್ಣಗೊಳಿಸಬೇಕು. ಯಾವುದೇ ಕಾಮಗಾರಿ ಬಾಕಿ ಉಳಿಸಬಾರದು ಎಂದು ತಾಕೀತು ಮಾಡಿದರು.
ಬೇಸಿಗೆ ಇನ್ನೂ ಒಂದೂವರೆ ತಿಂಗಳು ಇರಲಿದ್ದು, ಅಧಿಕಾರಿಗಳು ಯಾರೂ ಮೈಮರೆಯದೆ ಜನರಿಗೆ ಶುದ್ಧ ಕುಡಿವ ನೀರು ಒದಗಿಸಲು ಆದ್ಯತೆ ನೀಡಬೇಕು. ಶುದ್ಧ ಕುಡಿವ ನೀರಿನ ಘಟಕಗಳ ಬಗ್ಗೆ ಹಲವು ದೂರುಗಳು ಕೇಳಿಬರುತ್ತಿವೆ. ಪಿಡಿಒಗಳು ತಕ್ಷಣ ಎಚ್ಚೆತ್ತು ಎಲ್ಲ ಆರ್‌ಒ ಪ್ಲಾಂಟ್ ರಿಪೇರಿ ಮಾಡಿಸಬೇಕು. ನೀರಿನ ಸಮಸ್ಯೆ ಇರುವ ಕಡೆ ಖಾಸಗಿ ಬೋರ್‌ವೆಲ್‌ಮೂಲಕ ಪೂರೈಕೆ ಮಾಡಬೇಕು. ಗ್ರಾಪಂಯಲ್ಲಿ ಅಂಗವಿಕಲರಿಗೆ ಮೀಸಲಿಟ್ಟ ಅನುದಾನ ಬೇರೆ ಕೆಲಸಕ್ಕೆ ಬಳಸದೆ ಮೀಸಲಿಡಬೇಕು. ಹಳ್ಳಿಗಳಲ್ಲಿ ಚರಂಡಿ, ತಿಪ್ಪೆಗುಂಡಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕಸ ವಿಲೇವಾರಿ ಸಮರ್ಪಕವಾಗಿ ಮಾಡಬೇಕು. ಶೀಘ್ರದಲ್ಲಿ ಜನಸ್ಪಂದನೆ ಕಾರ್ಯಕ್ರಮ ಮಾಡುತ್ತೇನೆ. ಇದಕ್ಕೆ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲಾ ಯೋಜನಾಧಿಕಾರಿ ಬಸವರಾಜ, ತಹಸೀಲ್ದಾರ್ ನಾಗಮ್ಮ ಕಟ್ಟಿಮನಿ, ತಾಪಂ ಇಒ ರಾಜೇಂದ್ರ ಕೆ., ಅರಕೇರಾ ತಾಪಂ ಇಒ ವಾಲ್ಮೀಕಿ ನಾಯಕ, ಎಡಿ ಮಹೇಶ್ವರಿ ಹಾಗೂ ಪಿಡಿಒಗಳು ಇದ್ದರು.