ಮಾನ್ವಿ: ಪಟ್ಟಣಕ್ಕೆ ಕುಡಿವ ನೀರಿನ ಕೆರೆ ತುಂಬಿಸಲು ತುಂಗಭದ್ರಾ ಕಾಲುವೆಗೆ ನೀರು ಹರಿಸಿದ್ದು, ಪುರಸಭೆ ನಾಲೆ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದೆ.
ತುಂಗಭದ್ರಾ 85ನೇ ಉಪ ಕಾಲುವೆಗೆ ಸಾರ್ವಜನಿಕರು ಕೊಳಚೆ ನೀರು ಹಾಗೂ ಕಸ ಹಾಕುತ್ತಿರುವುದರಿಂದ ಅನೈರ್ಮಲ್ಯದಿಂದ ಕೂಡಿದೆ. ಹೀಗಾಗಿ ಪುರಸಭೆ ಸಿಬ್ಬಂದಿ ಕಳೆದ ಎರಡ್ಮೂರು ದಿನಗಳಿಂದ ಜೆಸಿಬಿ ಮತ್ತು ಸೇಫ್ಟಿ ಕ್ಲೀನರ್ ಬಳಸಿಕೊಂಡು ಕಾಲುವೆಯಲ್ಲಿ ಸಂಗ್ರಹವಾದ ಕೊಳಚೆ ನೀರು ಹಾಗೂ ಕಸವನ್ನು ತೆರವುಗೊಳಿಸುತ್ತಿದೆ.
ಈಗಾಗಲೇ ಕಾಲುವೆಗೆ ನೀರು ಬಿಡಲಾಗಿದೆ. 85ನೇ ನಾಲೆ ನೀರು ಬರಲಿದ್ದು, ಸ್ವಚ್ಛ ಮಾಡಲಾಗುತ್ತಿದೆ. ಸಾರ್ವಜನಿಕರು ಕೂಡ ಚರಂಡಿ ನೀರು ಹಾಗೂ ಕಸವನ್ನು ಕಾಲುವೆಗೆ ಹಾಕಬಾರದು ಎಂದು ಪುರಸಭೆ ಮುಖ್ಯಾಧಿಕಾರಿ ಪರಶುರಾಮ್ ದೇವಮಾನೆ ಹೇಳಿದರು.
ಎಡದಂಡೆ 85ನೇ ಕಾಲುವೆ ಮುಖಾಂತರ ಕೆರೆಗೆ ಬಿಡುವ ನೀರು ನೇರವಾಗಿ ಕುಡಿವ ನೀರಿನ ಕೆರೆಗೆ ಬಿಡುವುದಿಲ್ಲ. ನಾಲೆ ಸ್ವಚ್ಛಗೊಳಿಸಿದ ನಂತರ ಕಾಲುವೆ ನೀರು 12 ತಾಸು ಬೇರೆ ಕಡೆ ಬಿಡಲಾಗುವುದು.
ಶುದ್ಧ ನೀರು ಬಂದ ನಂತರ ಕೆರೆಗೆ ಹರಿಸಲಾಗುವುದು. ಕುಡಿವ ನೀರಿನ ಕೆರೆಗೆ ಎಡದಂಡೆ 85ನೇ ಕಾಲುವೆ ಮೂಲಕ ಕೆರೆ ತುಂಬಿಸುವುದು ಈ ವರ್ಷ ಕೊನೆ. ಮುಂದೆ ತುಂಗಭದ್ರಾ ನದಿಯಿಂದ ಕುಡಿವ ನೀರಿನ ಕೆರೆಗೆ ನೇರವಾಗಿ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ನಡೆದಿದೆ. ಅದಷ್ಟು ಬೇಗ ಕಾಮಗಾರಿ ಮುಗಿಯಲಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು.