ತಿಂಗಳಲ್ಲಿ ಮೂರನೇ ಬಾರಿಗೆ ಮಕ್ಕಳು ಅಸ್ವಸ್ಥ

ಸಿಂಧನೂರು ತಾಯಿ-ಮಕ್ಕಳ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಅಂಬೇಡ್ಕರ್ ವಸತಿ ನಿಲಯದ ಮಕ್ಕಳು.
ಸಿಂಧನೂರು ತಾಯಿ-ಮಕ್ಕಳ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಅಂಬೇಡ್ಕರ್ ವಸತಿ ನಿಲಯದ ಮಕ್ಕಳು.
Published on

ಪ್ರಮುಖ ಮುಖ್ಯಾಂಶಗಳು

  • ಅಂಬೇಡ್ಕರ್
  • ವಸತಿ
  • ನಿಲಯ

ಸಿಂಧನೂರು: ಮಕ್ಕಳು ಆಹಾರ ವ್ಯತ್ಯಾಸದಿಂದ ನಗರದ ಹೃದಯ ಭಾಗದಲ್ಲಿರುವ ಮೆಟ್ರಿಕ್ ಪೂರ್ವ ಡಾ. ಬಿ.ಆರ್. ಅಂಬೇಡ್ಕರ್ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ತಿಂಗಳೊಳಗೆ ಮೂರು ಬಾರಿ ಅಸ್ವಸ್ಥಗೊಂಡು ಆಸ್ಪತ್ರೆಗೆ ಸೇರುತ್ತಿರುವುದು ತೀವ್ರ ಆತಂಕಕ್ಕೆ

ಕಾರಣವಾಗಿದ್ದು, ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

ವಸತಿ ನಿಲಯದಲ್ಲಿ ಪದೇಪದೆ ವಿದ್ಯಾರ್ಥಿನಿಯರು ಅಸ್ವಸ್ಥರಾಗುತ್ತಿರುವುದಕ್ಕೆ ಆಹಾರ, ಕುಡಿವ ನೀರು ಹಾಗೂ ನೈರ್ಮಲ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸದಿರುವುದೆ ಮೂಲ ಕಾರಣ ಎಂಬ ಆರೋಪ ಕೇಳಿಬಂದಿದೆ.
ಇತ್ತೀಚಿನ ದಿನಗಳಲ್ಲಿ ನಿಲಯದ ಹಲವು ವಿದ್ಯಾರ್ಥಿನಿಯರು ಹೊಟ್ಟೆನೋವು, ವಾಂತಿ ಹಾಗೂ ತಲೆನೋವು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅಸ್ವಸ್ಥರಾದವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದ್ದರೂ, ಸಮಸ್ಯೆಯ ಮೂಲ ಕಾರಣ ಪತ್ತೆಹಚ್ಚಿ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಗಂಭೀರ ಕ್ರಮವಾಗಿಲ್ಲ. ವಿದ್ಯಾರ್ಥಿನಿಯರಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟ, ಅಡುಗೆಮನೆಯ ಸ್ವಚ್ಛತೆ ಹಾಗೂ ನೀರಿನ ಶುದ್ಧತೆಯನ್ನು ನಿಯಮಿತವಾಗಿ ಪರಿಶೀಲಿಸಬೇಕಿದ್ದ ಇಲಾಖೆಯಿಂದ ನಿರ್ಲಕ್ಷ್ಯ ಮುಂದುವರಿದಿದೆ ಎಂಬುದು ಪಾಲಕರು-ವಿದ್ಯಾರ್ಥಿಗಳ ಆರೋಪ
ನಿಜವಾದ ಕಾರಣವೇನು ?
ಒಂದೇ ತಿಂಗಳ ಅವಧಿಯಲ್ಲಿ ಇದು ಮೂರನೇ ಪ್ರಕರಣವಾಗಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ನಿಜವಾಗಿಯೂ ಆಹಾರದಲ್ಲಿ ವ್ಯತ್ಯಾಸವಾಗುತ್ತಿದೆಯೋ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಕಾರಣವಿದೆಯೋ ಎನ್ನುವ ಪ್ರಶ್ನೆ ಮೂಡಿದೆ. ಕಳೆದ ಹಲವು ತಿಂಗಳಿಂದ ನಿಲಯದಲ್ಲಿ ಅಡುಗೆದಾರರು ಮತ್ತು ಮೇಲ್ವಿಚಾರಕರ ನಡುವೆ ತಿಕ್ಕಾಟ ನಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಅಡುಗೆ ವಿಷಯದಲ್ಲೇ ಇಬ್ಬರ ನಡುವೆ ತಕರಾರು ಉಂಟಾಗುತ್ತಿದ್ದು, ಈ ಹಿಂದಿನ ಸಭೆಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ನಟರಾಜ ಅವರು ಮಕ್ಕಳು ಅಸ್ವಸ್ಥಗೊಳ್ಳಲು ಅಡುಗೆಯಲ್ಲಿ ಆಗುತ್ತಿರುವ ವ್ಯತ್ಯಾಸವೇ ಕಾರಣವೆಂದು ಬಹಿರಂಗವಾಗಿ ಹೇಳಿದ್ದರು.
ಆದರೆ ಕಿರಿಕ್ ಮಾಡುತ್ತಿರುವ ಅಡುಗೆದಾರರನ್ನು ತೆಗೆದು ಬೇರೆಯವರನ್ನು ನೇಮಿಸಲು ಜನಪ್ರತಿನಿಧಿಗಳು ಬಿಡುತ್ತಿಲ್ಲ. ಹೀಗೆ ಜಗಳ ಮಾಡುವ ಅಡುಗೆದಾರರೇ ಮುಂದುವರಿದಿರುವುದರಿಂದ ಇಂತಹ ಘಟನೆಗಳು ಮರುಕಳಿಸುತ್ತಿವೆ ಎನ್ನಲಾಗಿದೆ. ವಿದ್ಯಾರ್ಥಿನಿಯರು ಅಸ್ವಸ್ಥರಾಗುತ್ತಿರುವುದಕ್ಕೆ ನಿಖರ ಕಾರಣವೇನು ಹಾಗೂ ಆಹಾರ ಮತ್ತು ನೀರಿನ ಗುಣಮಟ್ಟವನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆಯೇ ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡಿವೆ.
ಕಬ್ಬಿಣದ ತಂತಿ ಪ್ರತ್ಯಕ್ಷ !
ಶನಿವಾರ ಬೆಳಗ್ಗೆ ಎಂದಿನಂತೆ ಉಪಹಾರಕ್ಕೆ ತೆರಳಿದಾಗ ಆಹಾರದಲ್ಲಿ ಕಬ್ಬಿಣದ ತಂತಿವೊಂದು ಕಾಣಿಸಿಕೊಂಡಿದೆ. ಇದನ್ನು ನೋಡಿ ಬೆಚ್ಚಿಬಿದ್ದ ಐದಾರು ಮಕ್ಕಳು ವಾಂತಿ ಮಾಡಿಕೊಂಡಿದ್ದು, ನಂತರ ಸುಮಾರು 20ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡು ಸ್ಥಳೀಯ ತಾಯಿ-ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯಿಂದ ಹೆದರಿ ಮಕ್ಕಳು ಊಟ ಮಾಡದಿರುವುದರಿಂದ ಅಸಿಡಿಟಿ ಉಂಟಾಗಿದೆ, ಪ್ರಸ್ತುತ ಮಕ್ಕಳ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಲಾಗಿದೆ.

ವಸತಿ ನಿಲಯದಲ್ಲಿ ಮೂರನೇ ಬಾರಿಗೆ ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಈ ಮೊದಲು ಅಡುಗೆಯಲ್ಲಿ ವ್ಯತ್ಯಾಸವಾಗಿದ್ದು, ಇವತ್ತಿನ ಪ್ರಕರಣದಲ್ಲಿ ಮಕ್ಕಳು ಯಾರೂ ಊಟ ಮಾಡಿಲ್ಲ. ಇದರಿಂದ ಸಂಕಟವಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ನಾನೇ ಖುದ್ದಾಗಿ ಜೊತೆಯಲ್ಲಿದ್ದು ಬೆಳಗಿನ ಉಪಹಾರ ಆಸ್ಪತ್ರೆಯಲ್ಲಿ ಮಾಡಿಸಿದ್ದೇನೆ. ಗುಣಮಟ್ಟದ ಆಹಾರ ನೀಡಲು ಮುಂದಾದರೂ ಇಂತಹ ಪ್ರಕರಣಗಳು ನಡೆಯುತ್ತಿರುವುದು ಆಶ್ಚರ್ಯ ಮೂಡಿಸಿದೆ.

— ನಟರಾಜ, ವಸತಿ ನಿಲಯ ಮೇಲ್ವಿಚಾರಕ, ಸಿಂಧನೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net