ಸರ್ಕಾರಿ ನೌಕರರೊಂದಿಗೆ ಮುಖ್ಯಮಂತ್ರಿಗಳ ವಿಡಿಯೋ ಸಂವಾದ ಕಾರ್ಯಕ್ರಮ
ರಾಯಚೂರಿನ ಜಿಪಂ ಸಭಾಮಗಣದಲ್ಲಿ ಮಂಗಳವಾರ ವಿಡಿಯೋ ಸಂವಾದದ ಮೂಲಕ ಸಿಎಂ ಡಿಕೆ ಶಿವಕುಮಾರ ಜಿಲ್ಲೆಯ ಅಧಿಕಾರಿಗಳೊಂದಿಗೆ ಮಾತನಾಡಿದರು. ಜಿಪಂ ಸಿಇಓ ಈಶ್ವರ ಕುಮಾರ ಕಾಂದೊ, ಎಸ್ಪಿ ಅರುಣಾಂಗ್ಷು ಗಿರಿ., ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ, ಅಪರ ಜಿಲ್ಲಾಧಿಕಾರಿ ಶಿವಾನಂದ,ಜಿಪಂ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ, ಯೋಜನಾಧಿಕಾರಿ ಡಾ.ಟಿ.ರೋಣಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಕೃಷ್ಣ ಇದ್ದರು.
ರಾಜ್ಯ ಸರ್ಕಾರದ ಜನಕಲ್ಯಾಣ ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಮಾಡಲು ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಾ ಸರ್ಕಾರಿ ನೌಕರರೊಂದಿಗೆ ವಿಡಿಯೋ ಸಂವಾದ ಮೂಲಕ ನೇರ ಸಂವಾದ ಮಾಡಿದರು.
ಸಂವಾದದಲ್ಲಿ ಮುಖ್ಯಮಂತ್ರಿ ಡಿಕೆ.ಶಿವಕುಮಾರ ಮಾತನಾಡಿ, ನಾವು ಮಾಡುವ ಮಂತ್ರಿ ಹುದ್ದೆ ಅಥವಾ ರಾಜಕೀಯ ಸ್ಥಾನಗಳು ಕೇವಲ ಹೆಸರು ಮಾತ್ರ, ಮೂಲತಃ ನಾವೆಲ್ಲವೂ ಸರ್ಕಾರದ ಸೇವಕರು. ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ಜನಸೇವೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ರಾಜ್ಯದಲ್ಲಿ ಏಳು ಕೋಟಿಗಿಂತಲೂ ಹೆಚ್ಚು ಜನರಿದ್ದಾರೆ, ಆದರೆ ಸರ್ಕಾರಿ ನೌಕರರಾಗಿ ಹಾಗೂ ಸಾರ್ವಜನಿಕ ಸೇವೆ ಮಾಡಲು ಸಿಗುವ ಅವಕಾಶ ಕೆಲವೇ ಲಕ್ಷ ಜನರಿಗೆ ಮಾತ್ರ ಲಭ್ಯವಾಗುತ್ತದೆ. ಈ ಭಾಗ್ಯವನ್ನು ಭಗವಂತ ಹಾಗೂ ಹಿರಿಯರ ಆಶೀರ್ವಾದದಿಂದ ಪಡೆದಿದ್ದೇವೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವುದು ಅತ್ಯಂತ ಮುಖ್ಯ ಎಂದರು.
ಸರ್ಕಾರಿ ನೌಕರರು ಆಡಳಿತದ ಬೆನ್ನೆಲುಬು. ಸಾರ್ವಜನಿಕರ ಅರ್ಜಿಗಳು ಮತ್ತು ಕುಂದುಕೊರತೆಗಳನ್ನು ವಿಳಂಬವಿಲ್ಲದೆ ವಿಲೇವಾರಿ ಮಾಡಿ, ಭ್ರಷ್ಟಾಚಾರ ರಹಿತ ಹಾಗೂ ಪಾರದರ್ಶಕ ಸೇವೆ ನೀಡುವ ಮೂಲಕ ಜನಸೇವೆಯೇ ಸರ್ಕಾರದ ಆದ್ಯತೆಯಾಗಬೇಕು ಎಂದು ಮುಖ್ಯಮಂತ್ರಿಗಳು ಸರ್ಕಾರಿ ನೌಕರರಿಗೆ ಸೂಚಿಸಿದರು.
ಡಿಸಿಎಂ ಡಾ.ಜಿ.ಪರಮೇಶ್ವರ ಅವರು ಮಾತನಾಡಿ, ಸರ್ಕಾರವನ್ನು ಸಾರ್ವಜನಿಕರ ಹತ್ತಿರಕ್ಕೆ ಕೊಂಡೊಯ್ಯುವ ಹಾಗೂ ಜನರ ಅಹವಾಲುಗಳಿಗೆ ತ್ವರಿತವಾಗಿ ಸ್ಪಂದಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯದಲ್ಲಿಪ್ರಜಾಸೇವೆ ಎಂಬ ನೂತನ ಇಲಾಖೆಯನ್ನು ಪ್ರಾರಂಭಿಸಿದೆ. ಸಾರ್ವಜನಿಕರ ಸಮಸ್ಯೆಗಳು, ಅಹವಾಲುಗಳನ್ನು ಆಲಿಸಲು ಸೂಕ್ತ ವೇದಿಕೆಗಳ ಕೊರತೆ ಹಾಗೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಈ ಹೊಸ ಚಿಂತನೆ ನಡೆಸಿದ್ದಾರೆ. ಇದಕ್ಕಾಗಿ ’ಪ್ರಜಾಸೇವೆ’ ಎಂಬ ಪ್ರತ್ಯೇಕ ಇಲಾಖೆಯನ್ನೇ ಆರಂಭಿಸಿ, ಹಿರಿಯ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.
ಮುಖ್ಯಮಂತ್ರಿಗಳೊಂದಿಗೆ ಸರ್ಕಾರಿ ನೌಕರರ ಸಂವಾದ ಕಾರ್ಯಕ್ರಮ ಹಿನ್ನೆಲೆಯಲ್ಲಿ ರಾಯಚೂರಿನ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಜಿಪಂ ಸಿಇಓ ಈಶ್ವರ ಕುಮಾರ್ ಕಾಂದೂ ಅವರು ಈ ಸಂವಾದಲ್ಲಿ ಭಾಗವಹಿಸಿ ಮಾತನಾಡಿ, ಮುಖ್ಯಮಂತ್ರಿಗಳು ಜಿಲ್ಲೆಯ ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದನೆ ಮಾಡಬೇಕು. ಕುಡಿಯುವ ನೀರಿನ ಸಮಸ್ಯೆಗಳಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯ ಸಮಿತಿಯ ಸದಸ್ಯರಾದ ಡಾ.ಶಂಕರಗೌಡ ಎಸ್.ಪಾಟೀಲ್, ಡಿಎಚ್‌ಓ ಡಾ.ನಂದಿತಾ ಎಂ.ಎನ್, ಆಹಾರ ಇಲಾಖೆಯ ಉಪ ನಿರ್ದೇಶಕ ನಜೀರ್ ಅಹ್ಮದ್, ಪಾಲಿಕೆ ಉಪ್ ಆಯುಕ್ತೆ ಸಂತೋಷ ರಾಣಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿರೇಶ ನಾಯಕ ಸೇರಿದಂತೆ ಅನೇಕರು ಇದ್ದರು.