ಒಳಬಳ್ಳಾರಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಜನಸಂಪರ್ಕ ಸಭೆಯಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿದರು. ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗಪ್ಪ ಧಡೇಸೂಗೂರು, ಜಿಪಂ ಮಾಜಿ ಸದಸ್ಯ ಬಸವರಾಜ ಹಿರೇಗೌಡರ್, ಮುಖಂಡರಾದ ಸತ್ಯನಗೌಡ ಒಳಬಳ್ಳಾರಿ, ಕರಿಯಪ್ಪ, ಮಲ್ಲನಗೌಡ ಮಾವಿನಮಡು ಇದ್ದರು.
ಸಿಂಧನೂರು: ವಿಬಿ ರಾಮ್ ಜಿಯು ಕೇಂದ್ರ ಸರ್ಕಾರದ ಕರಾಳ ಕಾಯ್ದೆಯಾಗಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ತಾಲೂಕಿನ ಬಾದರ್ಲಿ ಗ್ರಾಮದಲ್ಲಿ ನಗರ ಹಾಗು ಗ್ರಾಮೀಣ ಬ್ಲಾಕ್ ಕಾಂಗ್ರೆಸ್‌ನಿಂದ ನರೇಗಾ ಬಚಾವ್ ಆಂದೋಲನದ ಪ್ರಯುಕ್ತ ಮಂಗಳವಾರ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು. ವಿಕೇಂದ್ರಿಕರಣ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಅಗಾಧವಾಗಿದೆ. ಗ್ರಾಮ ಪಂಚಾಯಿತಿಗಳಿಗೆ ಸಂಪೂರ್ಣ ಅಧಿಕಾರವನ್ನು ನೀಡಿರುವುದನ್ನು ಕಸಿಯುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ. ಅನುದಾನ ತೆಗೆದುಕೊಳ್ಳುವ, ಸಭೆ ಮೂಲಕ ಅಭಿವೃದ್ಧಿಪಡಿಸುವ ಅಧಿಕಾರವನ್ನು ಗ್ರಾಮ ಪಂಚಾಯಿತಿಗಳಿಂದ ಕಿತ್ತುಕೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರದವರು ಅನುದಾನ ನೀಡಿದಿದ್ದರೆ, ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ದಿಯೇ ಸ್ಥಗಿತಗೊಳ್ಳಲಿದೆ. ಹೀಗಾಗಿ ಆರಂಭದಲ್ಲೇ ಈ ಕುರಿತು ಜಾಗೃತಿ ಮೂಡಿಸಬೇಕು. ಕಾಂಗ್ರೆಸ್ ಪಕ್ಷವು ದೇಶಾದ್ಯಂತ ಹೋರಾಟ ಸಂಘಟಿಸುತ್ತಿದ್ದು, ಹೊಸ ಕಾಯ್ದೆ ಅನುಷ್ಠಾನಗೊಳಿಸದಂತೆ ಹೋರಾಟ ನಡೆಸಬೇಕು. ಮೂರ‌್ನಾಲ್ಕು ತಿಂಗಳಲ್ಲಿ ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳು ಬರಲಿದ್ದು, ಎಲ್ಲರೂ ಸಜ್ಜಾಗಬೇಕು ಎಂದರು.
ಈ ಭಾಗದಲ್ಲಿ ಏತ ನೀರಾವರಿ ಯೋಜನೆ, ಶಾಲೆ, ರಸ್ತೆಗಳಿಗೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿಪಡಿಸಲಾಗಿದೆ. ಹೊಸದಾಗಿ 69 ಕೋಟಿ ವೆಚ್ಚದಲ್ಲಿ ಒಳಬಳ್ಳಾರಿ ಹತ್ತಿರ ಬ್ರಿಜ್ ಕಂ ಬ್ಯಾರೇಜ್ ಮಾಡಲಾಗಿದೆ. 61 ಕೋಟಿ ವೆಚ್ಚದಲ್ಲಿ ಗಿಣಿವಾರ, ಬಾದರ್ಲಿ, ಹರೇಟನೂರಿಗೆ ತುಂತುರು ನೀರಾವರಿ ಯೋಜನೆಯಡಿ 6500 ಎಕರೆಗೆ ನೀರೊದಗಿಸುವ ಯೋಜನೆಗೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು. ಸೋಲಾರ್ ಪೆನಾಲ್ ಮೂಲಕ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗುವುದು. ಕರ್ನಾಟಕದಲ್ಲೇ ಮೊದಲ ಯೋಜನೆ ಇದಾಗಿದೆ ಎಂದು ಭರವಸೆ ನೀಡಿದರು.
ಇದಕ್ಕೂ ಮೊದಲು ವಳಬಳ್ಳಾರಿ, ಬಳಿಕ ಅಲಬನೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಜನಸಂಪರ್ಕ ಸಭೆ ನಡೆಯಿತು.
ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗಪ್ಪ ಧಡೇಸೂಗೂರು, ಜಿಪಂ ಮಾಜಿ ಸದಸ್ಯ ಬಸವರಾಜ ಹಿರೇಗೌಡರ್, ಮುಖಂಡರಾದ ಸತ್ಯನಗೌಡ ಒಳಬಳ್ಳಾರಿ, ಕರಿಯಪ್ಪ, ಮಲ್ಲನಗೌಡ ಮಾವಿನಮಡು, ಉದಯಗೌಡ ಹರೇಟನೂರು, ಚಂದ್ರೇಗೌಡ ಹರೇಟನೂರು, ಶ್ರೀದೇವಿ ಶ್ರೀನಿವಾಸ ಇತರರು ಇದ್ದರು.